ಬಾಗಲಕೋಟೆ/ಬೆಳಗಾವಿ:ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕ ಮೂಲದ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ವಾಹನ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿ, ಐವರು ತೀವ್ರವಾಗಿ ಗಾಯಗೊಂಡ ದುರ್ಘಟನೆ ಸಂಭವಿಸಿತ್ತು.
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಬೆಳಗಾವಿ ತಾಲೂಕಿನ ಪಂತನಗರದ ಯೋಧ ದಯಾನಂದ ತಿರಕಣ್ಣವರ (44) ಹಾಗೂ ಕುಂದಾಪುರದ ಅನೂಪ್ ಎಂಬವರೂ ಕೂಡ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬನಹಟ್ಟಿಯ ತಾಲೂಕಿನ ಮಹಾಲಿಂಗಪುರ ಮಹೇಶ್ ಮರಿಗೊಂಡ ಅವರು 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೈನಿಕರನ್ನು ಹೊತ್ತ ವಾಹನವು ಮೆಂಡರ್ ಎಂಬ ಪ್ರದೇಶಕ್ಕೆ ಕರ್ತವ್ಯಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ.
ಯೋಧ ಮಹೇಶ್ ಮಾರಿಗೊಂಡ (ETV Bharat) ಎರಡು ವರ್ಷಗಳಲ್ಲಿ ನಿವೃತ್ತಿ ಆಗಲಿದ್ದ ಯೋಧ: ಬೆಳಗಾವಿಯ ದಯಾನಂದ ಕಲ್ಲಪ್ಪ ತಿರಕನ್ನವರ ಅವರು ಭಾರತೀಯ ಸೇನೆಯ 11ನೇ ಮರಾಠಾ ಲಘು ಪದಾತಿದಳದ ಮಿಂಡರ್ದಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಇನ್ನು ಎರಡು ವರ್ಷಗಳಲ್ಲಿ ಸೇವೆಯಿಂದ ನಿವೃತ್ತಿ ಆಗಲಿದ್ದರು.
ಸಿಎಂ ಸಂತಾಪ:ಈ ಬಗ್ಗೆ ಮುಖ್ಯಮಂತ್ರಿಗಳು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ''ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ'' ಎಂದಿದ್ದಾರೆ.
ಮಣಿಪುರದಲ್ಲಿ ಚಿಕ್ಕೋಡಿ ಯೋಧ ಮೃತ:ಮತ್ತೊಂದು ಘಟನೆಯಲ್ಲಿ, ಮಣಿಪುರದ ಇಂಪಾಲ್ ಜಿಲ್ಲೆಯ ಬೊಂಬಾಲಾದಲ್ಲಿ ಕಂದಕಕ್ಕೆ ಸೇನಾ ವಾಹನ ಉರುಳಿ ಬಿದ್ದು ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಖೋತ (43) ಅವರು ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿಕೊಂಡು ಬರುತ್ತಿರುವಾಗ ಅವಘಡ ನಡೆದಿತ್ತು. ಅವರು ಇನ್ನು 2-3 ಕೇವಲ ತಿಂಗಳಲ್ಲಿ ನಿವೃತ್ತಿ ಆಗಲಿದ್ದರು. ಒಟ್ಟು 6 ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಇದಾಗಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧರ್ಮರಾಜ ಅವರಿಗೆ ಹಿರಿಯ ಸೇನಾಧಿಕಾರಿಗಳು ಅಂತಿಮ ಗೌರವ ಅರ್ಪಿಸಿದ್ದು, ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರ ರವಾನೆ ಮಾಡಲಾಗಿದೆ. ಪಾರ್ಥಿವ ಶರೀರವು ಕುಪ್ಪಾನವಾಡಿಗೆ ತಲುಪಲಿದ್ದು, ನಾಳೆ ಅಂತ್ಯ ಸಂಸ್ಕಾರ ನೆರವೇರಲಿದೆ.
ಯೋಧ ಧರ್ಮರಾಜ ಖೋತ (ETV Bharat) ಇದನ್ನೂ ಓದಿ: ಸೇನಾ ವಾಹನ ಕಮರಿಗೆ ಉರುಳಿ ಬಿದ್ದು ಐವರು ಯೋಧರು ಸಾವು, ಐವರಿಗೆ ಗಾಯ