ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಕೇಕ್​ ಎಸೆನ್ಸ್ ಸೇವಿಸಿ ಮೂವರು ಕೈದಿಗಳ ಸಾವು ಪ್ರಕರಣ: ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು? - MYSURU CENTRAL JAIL PRISONERS DIES

ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಅವರಿಗೆ ಚಿಕಿತ್ಸೆ ನೀಡಿದ ಕೆ.ಆರ್. ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕರು ಮಾಹಿತಿ ಹಂಚಿಕೊಂಡಿದ್ದಾರೆ.

prisoners death
ಕೆ.ಆರ್.ಆಸ್ಪತ್ರೆ ಆವರಣ (ETV Bharat)

By ETV Bharat Karnataka Team

Published : Jan 8, 2025, 7:45 PM IST

ಮೈಸೂರು:ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳ ಸಾವು ಪ್ರಕರಣ ಸಂಬಂಧನಾವು ತಪಾಸಣೆ ಮಾಡಿದಾಗ ಸಾವಿಗೆ ಕಾರಣ ಏನೆಂಬುದು ದೃಢಪಟ್ಟಿಲ್ಲ. ಹೀಗಾಗಿ, ಎಫ್​ಎಸ್​ಎಲ್​ಗೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ಕೆ.ಆರ್. ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ.‌ದಿನೇಶ್ ಹೇಳಿದರು.

ಮೈಸೂರು ಕೇಂದ್ರ ಕಾರಾಗೃಹದ ಮೂವರು ಕೈದಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ ಅವರು, ''ನಮ್ಮ ಆಸ್ಪತ್ರೆಗೆ ಮೂರು ಸಜಾ ಕೈದಿಗಳು ಹೊಟ್ಟೆ ನೋವಿನ ಕಾರಣಕ್ಕಾಗಿ ದಾಖಲಾಗಿದ್ದರು. ಅದರಲ್ಲಿ ರಮೇಶ್ ಡಿ.26ರಂದು ಮತ್ತು ಮಾದೇಶ್ ಡಿ.29ರಂದು ಹಾಗೂ ನಾಗರಾಜು ಡಿ‌.30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮಲ್ಲಿ ಬಂದಾಗ ಅವರು ತೀವ್ರ ವಾಂತಿ, ಬೇದಿಯಿಂದ ಅವರು ಬಳಲುತ್ತಿದ್ದರು. ಆದ ಕಾರಣ‌ ಫುಡ್ ಇನ್ಫೆಕ್ಷನ್ ಆಗಿರಬಹುದು ಎಂದು ದಾಖಲು ಮಾಡಿಕೊಳ್ಳಲಾಗಿತ್ತು. ಅದಕ್ಕೆ ತಕ್ಕಂತೆ ‌ಚಿಕಿತ್ಸೆ ಪ್ರಾರಂಭ ಮಾಡಿ, ಕೆಲವು ತಪಾಸಣೆಗಳನ್ನು ನಡೆಸಿದೆವು. ಆಗ ಕಿಡ್ನಿಗೆ ಸಂಬಂಧಿಸಿದಂತೆ ವ್ಯತ್ಯಾಸ ಕಂಡು ಬಂದಿತ್ತು'' ಎಂದರು.

''ಹೀಗಾಗಿ ಡಯಾಲಿಸಿಸ್ ಮಾಡಲು ಪ್ರಾರಂಭಿಸಿದೆವು. ಆದರೆ, ದಿನ ಕಳೆದಂತೆ ರಮೇಶ್ ಎನ್ನುವ ಕೈದಿಗೆ ಕಿವಿ ಕೇಳುವುದು ಕಡಿಮೆ ಆಯಿತು. ಇದೇ ಸಮಯದಲ್ಲಿ ಇನ್ನಿಬ್ಬರೂ ಕೂಡ ಆಸ್ಪತ್ರೆಗೆ ದಾಖಲಾದರು. ಹೀಗಾಗಿ, ನಮಗೆ ಅನುಮಾನ ಬಂದು ಅವರನ್ನು ಒತ್ತಾಯ ಮಾಡಿ ಏನಾಗಿತ್ತು ಎಂದು ಕೇಳಿದೆವು. ಅಗ ಕೇಕ್ ತಯಾರು ಮಾಡಲು ಬಳಸುವ ಎಸೆನ್ಸ್ ಸೇವಿಸಿದ್ದೇವೆ ಎಂದು ಹೇಳಿದರು. ಬಳಿಕ ಅದನ್ನು ತರಿಸಿಕೊಂಡು ಯಾವ ಪ್ರಮಾಣದಲ್ಲಿ ಕುಡಿದಿದ್ದಾರೆ ಎಂದು ಪರೀಕ್ಷಿಸಲು ಮುಂದಾದಾಗ ಮೂರು ಜನ ಕೈದಿಗಳ ಸ್ಥಿತಿ ಗಂಭೀರವಾಗುತ್ತ ಬಂತು. ಆದ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ, ಅವರ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಕೆ.ಆರ್. ಆಸ್ಪತ್ರೆಯ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ.‌ದಿನೇಶ್ (ETV Bharat)

ಇತರ ಕೈದಿಗಳು ಆರಾಮಾಗಿದ್ದರು : ''ಎಷ್ಟು ಪ್ರಮಾಣದಲ್ಲಿ ಅದನ್ನು (ಎಸೆನ್ಸ್) ಸೇರಿಸಿದ್ದಾರೆ, ಅಥವಾ ಬೇರೆ ಇನ್ನೂ ಯಾವುದಾದರು ಡ್ರಗ್ ಸೇವಿಸಿದ್ದಾರೆಯೇ ಎಂದು ತಿಳಿಯಲು ಕಷ್ಟವಾಯ್ತು. ಈ ವಿಷಯವನ್ನು ಜೈಲಿನ ವೈದ್ಯಾಧಿಕಾರಿಗಳು ಮತ್ತು ಪೊಲೀಸರಿಗೆ ತಿಳಿಸಿದಾಗ ಜೈಲಿನ ಇತರೆ ಕೈದಿಗಳಲ್ಲಿ ಈ ರೀತಿಯ ಲಕ್ಷಣಗಳು ಯಾವುವು ಕಂಡುಬರಲಿಲ್ಲ. ಎಸೆನ್ಸ್ ಅನ್ನು ಎಲ್ಲಾ ರೀತಿ ಬೇಕರಿ ತಿಂಡಿ ತಿನಿಸುಗಳಲ್ಲಿ ಬಳಸುತ್ತಾರೆ. ಆದರೆ, ಅದನ್ನು ಯಾವ ಪ್ರಮಾಣದಲ್ಲಿ ಕುಡಿದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಜನವರಿ 6, 7 ಹಾಗೂ 8ರಂದು ತಲಾ ಒಬ್ಬೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿದ್ದಾರೆ'' ಎಂದು ವೈದ್ಯರು ಮಾಹಿತಿ ನೀಡಿದರು.

ಎಫ್​ಎಸ್​ಎಲ್​ ಪರೀಕ್ಷೆಗೆ ಮಾದರಿ ರವಾನೆ :''ದಿನ ಕಳೆದಂತೆ ಚಿಕಿತ್ಸೆಗೆ ದೇಹ ಸ್ಪಂದನೆ ನೀಡುತ್ತಿರಲಿಲ್ಲ, ದಿನೇ ದಿನೇ ನರಗಳು ನಿಶಕ್ತಿ ಅಗಲು ಪ್ರಾರಂಭಿಸಿದವು. ಕಿಡ್ನಿ ಕೂಡ ತನ್ನ ಕಾರ್ಯವನ್ನು ನಿರ್ವಹಿಸುವುದನ್ನು ನಿಲ್ಲಿಸಿತ್ತು. ನಾವು ಕೂಡ ಎಲ್ಲ ವೈದ್ಯಕೀಯ ಕಾಲೇಜುಗಳು ಮತ್ತು ನುರಿತರನ್ನು‌ ಸಂಪರ್ಕಿಸಿ ಎಸೆನ್ಸ್ ಕುಡಿದರೆ ಕಿಡ್ನಿ ಫೇಲ್ಯೂರ್ ಆಗುವ ಸಾಧ್ಯತೆ ಇದೆಯಾ ಎಂಬ ಮಾಹಿತಿಯನ್ನು ತೆಗೆದುಕೊಂಡೆವು. ಸಾಮಾನ್ಯವಾಗಿ ಡಯಾಲಿಸಿಸ್ ಮತ್ತು ಆಂಟಿ ಬಯೋಟೆಕ್​ಗಳನ್ನು ಕೊಡುತ್ತಿದ್ದೆವು. ಆದರೂ ಸಹ ಚಿಕಿತ್ಸೆಗೆ ಯಾವುದೇ ಸ್ಪಂದನೆ ನೀಡುತ್ತಿರಲಿಲ್ಲ. ಈಗ ಮೂವರು ಕೈದಿಗಳು ಸಾವನ್ನಪ್ಪಿದ್ದಾರೆ. ನಾವು ತಪಾಸಣೆ ಮಾಡಿದಾಗ ಸಾವಿಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಹೀಗಾಗಿ, ಮಾದರಿಯನ್ನು ಎಫ್​ಎಸ್​ಎಲ್​ಗೆ ಪರೀಕ್ಷೆಗಾಗಿ ಕಳುಹಿಸಿದ್ದೇವೆ. ಅದರಿಂದಲೇ ನಿಖರ ಕಾರಣ ತಿಳಿದುಬರಬೇಕಿದೆ'' ಎಂದು ವಿವರಿಸಿದರು.

ಇದನ್ನೂ ಓದಿ:ಸಮುದ್ರದಲ್ಲಿ ಈಜಲು ತೆರಳಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು; ಮಂಗಳೂರಲ್ಲಿ ದುರ್ಘಟನೆ

ABOUT THE AUTHOR

...view details