ಕೊಪ್ಪಳದಲ್ಲಿ ನಡೆದ ನಿಗೂಢ ಸಾವಿನ ಕುರಿತು ಸ್ಥಳೀಯರ ಹೇಳಿಕೆ (ಕೃಪೆ: ETV Bharat Karnataka) ಕೊಪ್ಪಳ: ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ಅಜ್ಜಿ, ಮಗಳು, ಮೊಮ್ಮಗ ಸೇರಿದಂತೆ ಮೂವರು ಶವ ಪತ್ತೆಯಾಗಿದ್ದಾರೆ. ಈ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ರಾಜೇಶ್ವರಿ (50), ರಾಜೇಶ್ವರಿ ಪುತ್ರಿ ವಸಂತಾ (28) ಮತ್ತು ವಸಂತಾ ಪುತ್ರ ಸಾಯಿ ಧರ್ಮತೇಜ್(5) ಎಂದು ಗುರುತಿಸಲಾಗಿದೆ.
ಈ ಮೂವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾರೋ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ರಾಜೇಶ್ವರಿಗೆ ಅವರ ಇನ್ನೊಬ್ಬ ಮಗಳು ಫೋನ್ ಕರೆ ಮಾಡಿದ್ದಾಳೆ. ಆದರೆ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ಇಂದು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಮನೆ ಬಾಗಿಲು ತೆಗೆದಿರಲಿಲ್ಲ. ಒಳ ಬಂದು ನೋಡಿದಾಗ ಮೂವರು ಸಾವಿಗೀಡಾಗಿದ್ದು ಕಂಡು ಬಂದಿದೆ. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ ರೂಮ್ನಲ್ಲಿ ಪತ್ತೆಯಾಗಿದ್ರೆ, ಮಗಳ ಶವ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ.
ವಸಂತಾಳಿಗೆ ಆಂಧ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಆದರೆ ಕೌಟಂಬಿಕ ಸಮಸ್ಯೆಯಿಂದ ಎರಡು ವರ್ಷದ ಹಿಂದೆ ಪತಿಯಿಂದ ವಸಂತ ದೂರವಾಗಿದ್ದರು. ನಂತರ ಹೊಸಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತಾಯಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದರು. ಹೊಸ ಲಿಂಗಾಪುರ ಬಳಿಯ ಬೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ನಿನ್ನೆ ಸಂಜೆಯವರೆಗೂ ಅವರು ಚೆನ್ನಾಗಿದ್ದರು. ವಸಂತಾ ಸೋಮವಾರ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳಿದ್ದಳು. ರಾತ್ರಿ ತಾಯಿ-ಮಗಳು ಜಗಳ ಮಾಡಿಕೊಂಡಿದ್ದರು. ಆಮೇಲೆ ಏನಾಯಿತು ನಮಗೆ ತಿಳಿದಿಲ್ಲ. ಮಂಗಳವಾರ ಬೆಳಗ್ಗೆ ನೋಡಿದರೆ ಮನೆಯಲ್ಲಿ ಮೂವರು ಶವವಾಗಿ ಕಂಡು ಬಂದಿದ್ದಾರೆ ಎಂದು ಸ್ಥಳೀಯರಾದ ಶಭಾನ ಹೇಳಿದ್ದಾರೆ.
ಸಾವಿನ ತನಿಖೆಗೆ ಆಗ್ರಹ: ಮೃತರ ಸಂಬಂಧಿ ಕುಮಾರ ಮಾತನಾಡಿ, ನಮ್ಮ ಅಕ್ಕನ ಸಂಸಾರ ಚೆನ್ನಾಗಿ ನಡೆದಿತ್ತು. ಕೊಲೆ ಮಾಡುವಂತ ದ್ವೇಷವನ್ನು ಯಾರೊಂದಿಗೂ ಅವರು ಹೊಂದಿರಲಿಲ್ಲ. ಎರಡು ವರ್ಷದ ಹಿಂದೆ ಗಂಡನೊಂದಿಗೆ ಜಗಳವಾಡಿ ಹೊಸಲಿಂಗಾಪುರಕ್ಕೆ ಬಂದು ನೆಲೆಸಿದ್ದರು. ಐದು ವರ್ಷದ ಚಿಕ್ಕ ಮಗುವನ್ನು ಕೂಡ ಕೊಲೆ ಮಾಡಿದ್ದಾರೆ. ಈ ಸಾವಿಗೆ ನಿಖರ ಕಾರಣ ತಿಳಿಯಬೇಕು ಮತ್ತು ಈ ಕೃತ್ಯ ಎಸಗಿದವರನ್ನ ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಆಗಬೇಕು ಎಂದು ಕುಮಾರ ಒತ್ತಾಯಿಸಿದ್ದಾರೆ.
ಪೊಲೀಸರು ಹೇಳಿದ್ದು ಹೀಗೆ: ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದೆನಿಸುತ್ತಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನಿಸುತ್ತಿದೆ. ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಈಗಾಗಲೇ ಎಫ್ಎಸ್ಎಲ್ ತಂಡ ಬಂದಿದ್ದು, ಅವರು ಎಲ್ಲವನ್ನೂ ಸಂಗ್ರಹಿಸುತ್ತಿದ್ದಾರೆ. ವೈಜ್ಞಾನಿಕವಾಗಿ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.
ಓದಿ:ಬೆಂಗಳೂರು: ಐಪಿಎಲ್ ಪಂದ್ಯದ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯ ಮೊಬೈಲ್ ಕದ್ದಿದ್ದ ಆರೋಪಿ ಅಂದರ್ - Mobile thief arrested