ರಾಯಚೂರು: ಎರಡು ಪತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ರಾಯಚೂರು ತಾಲೂಕಿನ ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು - ಮಂತ್ರಾಲಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮಿಟ್ಟಿಮಲ್ಕಾಪುರ ಗ್ರಾಮದ ಬಳಿ ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ರಸ್ತೆ ದುರಂತದಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ರಾಯಚೂರು ನಗರದ ಇಂದಿರಾ ನಗರದ ನಿವಾಸಿಗಳಾದ ರಾಘವೇಂದ್ರ (28), ಪರುಶುರಾಮ್ (30) ಮತ್ತು ಅಜಾದ್ ನಗರದ ಗೋವಿಂದ (28) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಯರಗೇರಾ ಪೊಲೀಸರು ಆಗಮಿಸಿದರು. ಮೃತದೇಹಗಳನ್ನ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮೃತರ ಕುಟುಂಬದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.