ಬೆಂಗಳೂರು: ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೋರ್ವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಇಬ್ಬರು ಪೊಲೀಸರು ಸೇರಿ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ ಗಣೇಶ್ ಎಂಬವರು ನೀಡಿದ ದೂರಿನ ಮೇರೆಗೆ ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಸಿಸಿಬಿ ವಿಶೇಷದಳ ವಿಭಾಗದ ಎಎಸ್ಐ ಸಗೀರ್ ಅಹಮದ್, ಹೆಡ್ ಕಾನ್ಸ್ಟೇಬಲ್ ಯತೀಶ್ ಹಾಗೂ ಆಟೋ ಚಾಲಕ ಸಮೀರ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಯಿಗೆ ಹುಷಾರಿಲ್ಲ ಎಂದು ಎಎಸ್ಐ ಸಗೀರ್ ದೀರ್ಘಕಾಲದಿಂದ ರಜೆಯಲ್ಲಿದ್ದ. ಮತ್ತೋರ್ವ ಆರೋಪಿಯಾಗಿರುವ ಯತೀಶ್ ಲಂಚ ಪಡೆದ ಆರೋಪದಡಿ ಸಸ್ಪೆಂಡ್ ಆಗಿದ್ದ. ಇಬ್ಬರು ಆರೋಪಿಗಳಿಗೆ ಸಮೀರ್ ಮಾಹಿತಿದಾರನಾಗಿದ್ದ. ದೂರುದಾರರು ಹವಾಲ ದಂಧೆ ನಡೆಸುತ್ತಿರುವ ಬಗ್ಗೆ ಅವರಿಬ್ಬರಿಗೆ ಮಾಹಿತಿ ನೀಡಿದ್ದ. ಇದರಂತೆ ಮೂವರು ಒಗ್ಗೂಡಿ ಸಂಚು ರೂಪಿಸಿದ್ದರು. ಕಳೆದ ಜ. 5ರಂದು ಜಯನಗರದ ಐದನೇ ಹಂತದಲ್ಲಿ ದೂರುದಾರರು ಕಾರಿನಲ್ಲಿ ಬರುವಾಗ ಆರೋಪಿಗಳು ಅಡ್ಡಗಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 4 ಲಕ್ಷ ಸುಲಿಗೆ: ದೂರುದಾರರ ಕಾರನ್ನು ಅಡ್ಡಗಟ್ಟಿ ಪೊಲೀಸ್ ಎಂದು ಗುರುತಿನ ಚೀಟಿ ತೋರಿಸಿದ್ದರು. ನಿಮ್ಮ ಕಾರಿನಲ್ಲಿ ಗಾಂಜಾವಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಪರಿಶೀಲಿಸಬೇಕೆಂದು ಹೇಳಿ ಆರೋಪಿಗಳು ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಬ್ಯಾಗ್ನಲ್ಲಿದ್ದ 4 ಲಕ್ಷ ಹಣ ನೀಡದಿದ್ದರೆ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಸುಳ್ಳು ಕೇಸ್ ಹಾಕುತ್ತೇವೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಲ್ಲದೆ, ಹಣವನ್ನ ಕಸಿದ ಬಗ್ಗೆ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರು ಎಂದು ನಾಗಾರ್ಜುನ ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾರಾಟದ ನೆಪದಲ್ಲಿ ಮಾಲೀಕರಿಂದ ಕೋಟ್ಯಂತರ ಮೌಲ್ಯದ ಚಿನ್ನ ಪಡೆದು ವಂಚಿಸಿದ ಸೇಲ್ಸ್‌ಮ್ಯಾನ್ ಸೆರೆ - GOLD FRAUD CASE