ಬೆಂಗಳೂರು:ಸಾಲ ತೀರಿಸಲು ಎಟಿಎಂಗೆ ನುಗ್ಗಿ 20 ಲಕ್ಷ ರೂಪಾಯಿ ದರೋಡೆ ಮಾಡಿದ ಇಬ್ಬರು ಮಾಜಿ ಕಸ್ಟೋಡಿಯನ್ಗಳು ಸೇರಿ ಮೂವರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಮುರುಳಿ, ವೆಂಕಟೇಶ್ ಹಾಗೂ ಸಾಯಿತೇಜ ಬಂಧಿತರು. ಬಂಧಿತರೆಲ್ಲರೂ ಯುವಕರಾಗಿದ್ದು, ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ಬಡಾವಣೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ಮೇ 30 ರಂದು 22 ಲಕ್ಷ ಹಣ ತುಂಬಿಸಲಾಗಿತ್ತು. ಆದರೆ, ಮೇ 31ರ ತಡರಾತ್ರಿ 20 ಲಕ್ಷ ಹಣ ಕಳ್ಳತನವಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಅಪರಿಚಿತ ಯುವಕನೋರ್ವ ಎಟಿಎಂಗೆ ಬಂದು ಪಾಸ್ವರ್ಡ್ ಬಳಸಿ ಹಣ ಕದ್ದಿರುವುದು ಗೊತ್ತಾಗಿತ್ತು. ಹಣ ತುಂಬಿಸುವ ಕಸ್ಟೋಡಿಯನ್ ಅಥವಾ ಪರಿಚಿತರೇ ಹಣ ಕಳ್ಳತನ ಮಾಡಿರುವ ಗುಮಾನಿ ವ್ಯಕ್ತವಾಗಿತ್ತು. ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿ ಹೊತ್ತಿದ್ದ ಸೆಕ್ಯೂರ್ ವ್ಯಾಲಿ ಇಂಡೇನ್ ಏಜೆನ್ಸಿಯ ನೌಕರರೇ ಕೃತ್ಯದಲ್ಲಿ ಭಾಗಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.
ಹಣ ಕಳ್ಳತನ ಪ್ರಕರಣ ದಾಖಲಿಸಿಕೊಂಡ ವಿವೇಕನಗರ ಪೊಲೀಸರು ಸೆಕ್ಯೂರ್ ವ್ಯಾಲಿ ಏಜೆನ್ಸಿಯಲ್ಲಿ ಕೆಲಸ ಮಾಡಿ ತೊರೆದಿದ್ದ ನೌಕರಿಗಾಗಿ ತಲಾಶ್ ನಡೆಸಿದ್ದರು. ಅನುಮಾನಸ್ಪಾದ ನೌಕರರ ಪಟ್ಟಿ ಸಿದ್ದಪಡಿಸಿಕೊಂಡು ತಾಂತ್ರಿಕವಾಗಿ ತನಿಖೆ ನಡೆಸಿದಾಗ ಮುರುಳಿ ಹಾಗೂ ವೆಂಕಟೇಶ್ ಎಂಬುವರ ಮೇಲೆ ಶಂಕೆ ವ್ಯಕ್ತವಾಗಿತ್ತು. ನಗರದಿಂದ ಆಂಧ್ರಕ್ಕೆ ಎಸ್ಕೇಪ್ ಆಗುತ್ತಿದ್ದ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನ ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.