ಹಾವೇರಿ: ಕರ್ನಾಟಕದ ರಾಜಕಾರಣ ಬಹು ದೊಡ್ಡ ಬದಲಾವಣೆ ಆಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ರಾಜ್ಯ ರಾಜಕೀಯ ತಮ್ಮ ಕಪಿಮುಷ್ಟಿಯಲ್ಲಿದೆ ಎಂದು ತಿಳಿದುಕೊಂಡಿದ್ದರು. ನಿಂತುಕೊಂಡ ಜಾಗ ಸರಿಯುತ್ತಿದೆ. ಸತ್ಯ ದರ್ಶನ ಅವರಿಗೆ ಆಗುತ್ತಿದೆ. ಈ ಚುನಾವಣೆಯ ತೀರ್ಪು ಬಂದ ನಂತರ ಅವರಿಗೆ ಸತ್ಯ ತಿಳಿಯುತ್ತದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಭಾರತ ನಿರ್ಮಾಣಕ್ಕಾಗಿ ನಿಮ್ಮ ಮತ ಹಾಕಿ, ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಬಿಜೆಪಿಗೆ ಮತ ಹಾಕಿ ಎಂದು ಬೊಮ್ಮಾಯಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆ ವ್ಯತ್ಯಾಸ ನಮ್ಮ ಜನರಿಗೆ ಗೊತ್ತಿದೆ. 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂತು. ಇದು ರಾಷ್ಟ್ರೀಯ ಚುನಾವಣೆ ಅನ್ನೋದು ಜನರಿಗೆ ಗೊತ್ತಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ವ್ಯಾಕ್ಸಿನ್ ಪಡೆದವರು ಋಣ ತೀರಿಸಿ:ಒಂದು ಕಾಲದಲ್ಲಿ ಭಾರತವನ್ನು ಕೀಳಾಗಿ ನೋಡುವ ಕಾಲ ಇತ್ತು. ಈಗ ಭಾರತದ ಸಲಹೆ ಕೇಳುವ ಸ್ಥಿತಿ ಬಂದಿದೆ. ಭಯೋತ್ಪಾದನಾ ಕೃತ್ಯ ನಡೆದರೆ ಮನಮೋಹನ್ ಸಿಂಗ್ ಪತ್ರ ಬರೆಯುವ ಕೆಲಸ ಮಾಡುತ್ತಿದ್ದರು. ಈಗ ಮೋದಿ ಕಾಲದಲ್ಲಿ ಸರ್ಜಿಕಲ್ ಸ್ಟ್ರೈಕ್ಗೆ ಭಯೋತ್ಪಾದಕರು ಹೆದರಿ ಹೋಗಿದ್ದಾರೆ. ಭಾರತ ಈಗ ಅಭಿವೃದ್ಧಿ ಆಗುತ್ತಿದೆ. ಬದುಕನ್ನು ಕಟ್ಟಿಕೊಡುವ ಗ್ಯಾರಂಟಿ ನರೇಂದ್ರ ಮೋದಿ ಗ್ಯಾರಂಟಿ. ಕೋವಿಡ್ನಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾದಾಗ ಮೋದಿ ಸರ್ಕಾರ ಎರಡು ಬಾರಿ ಉಚಿತ ವ್ಯಾಕ್ಸಿನ್ ನೀಡಿತು. ಕೋವಿಡ್ನಲ್ಲಿ ವ್ಯಾಕ್ಸಿನ್ ತೆಗೆದುಕೊಂಡ ಜನರು ನರೇಂದ್ರ ಮೋದಿ ಅವರಿಗೆ ಮತ ಹಾಕಿ ಋಣ ತೀರಿಸಬೇಕು ಎಂದು ಬೊಮ್ಮಾಯಿ ಮನವಿ ಮಾಡಿದರು.