ರಾಮನಗರ:"ನಾಳೆ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಬೃಹತ್ ಸಭೆ ಆಯೋಜನೆ ಮಾಡಲಾಗಿದೆ. ನಮ್ಮ ಎದುರು ಪಾರ್ಟಿ ಜೆಡಿಎಸ್ನವರು ಅಭಿವೃದ್ಧಿ ಕೆಲಸಗಳಿಲ್ಲದೇ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಈ ಉಪಚುನಾವಣೆ ಯಾವುದೇ ಪಕ್ಷದ ಮೇಲೆ ಪರಿಣಾಮ ಬೀರಲ್ಲ. ಈ ಚುನಾವಣೆಯಲ್ಲಿ ಯೋಗೇಶ್ವರ್ ಶಾಸಕರಾದ್ರೆ ನೀರಾವರಿ ಅಭಿವೃದ್ಧಿ ಆಗುತ್ತದೆ" ಎಂದು ಸಚಿವ ಚಲುವನಾರಾಯಸ್ವಾಮಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ತಾಲೂಕಿನಲ್ಲಿ ಶಾಶ್ವತವಾಗಿ ನೀರಾವರಿ ಅಭಿವೃದ್ಧಿ ಆಗುತ್ತದೆ. ಕೆಲವೊಮ್ಮೆ ಭಾವನಾತ್ಮಕವಾಗಿ ವೈಯಕ್ತಿಕವಾಗಿ ವೋಟ್ ಹಾಕಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷವನ್ನು ಮರೆತು ಯೋಗೇಶ್ವರ್ಗೆ ಮತ ಹಾಕಿ. ಕುಮಾರಸ್ವಾಮಿ ಅವರಿಂದ ತೆರವಾದ ಕ್ಷೇತ್ರದಲ್ಲಿ ಸಿಎಂ ಹಾಗೂ ಡಿಸಿಎಂ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆ ಮಾಡಿದ್ದಾರೆ. ನಾವು ಪ್ರಚಾರಕ್ಕೆ ಹೋದಾಗ ಸಾಕಷ್ಟು ಸಮಸ್ಯೆಯನ್ನು ಜನ ಹೇಳಿದ್ದಾರೆ. ನಾವು ಬಗೆಹರಿಸುವ ಕೆಲಸವನ್ನು ಮಾಡಿದ್ದೇವೆ. ಇವತ್ತು ಆದೇನೆ ಇದ್ರು ಮರೆಯೋಣ. ಮೂರೂವರೆ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುತ್ತದೆ. ಯಾರು ಏನ್ ಮಾಡಿದ್ರು ಏನೂ ನಡೆಯಲ್ಲ" ಎಂದರು.
"ಯಾರು ಏನೇ ಕೊಟ್ಟರೂ ತೆಗೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರಿ. ಐದು ಗ್ಯಾರಂಟಿಗಳನ್ನು ಕೆಲವರು ಬೇಡ ಅಂದ್ರು. ಆದರೂ ನಾವು ಕೊಟ್ಟಿದ್ದೇವೆ. ಕಂದಾಯ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಬಗೆ ಹರಿಸಿದ್ದೇವೆ. ನಾವು ಗ್ಯಾರಂಟಿ ಸೀಮಿತ ಅಲ್ಲದೇ ಉಳಿದ ಅಭಿವೃದ್ಧಿ ಕೆಲಸವನ್ನೂ ಮಾಡಿದ್ದೇವೆ. ಹೀಗಾಗಿ ಯೋಗೇಶ್ವರ್ಗೆ ಮತ ನೀಡಿ" ಎಂದು ಸಚಿವರು ಮನವಿ ಮಾಡಿದ್ರು.
ಉಪ ಚುನಾವಣೆ ಬಳಿಕ ಸರ್ಕಾರ ಉಳಿಯಲ್ಲ ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ, "ದೇವೇಗೌಡರು ಅವರದ್ದೇ ಸರ್ಕಾರ ಇದ್ರೂ, ಐದು ವರ್ಷ ಇರಲ್ಲ ಅಂತಾನೇ ಹೇಳುತ್ತಾರೆ" ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ವಿಚಾರದಲ್ಲಿ ಕಲ್ಲು ನೆಡುವ ವಿಚಾರ ಕುಮಾರಸ್ವಾಮಿ ಹೇಳಿಕೆಗೆ, "ನಾವೇನಾದ್ರು ಬೇಡ ಅಂತ ಹೇಳಿದ್ದೀವಾ..! ಸಿಎಂ ಆಗಿದ್ದಾಗ ಯಾಕೆ ಬಂದು ನೆಟ್ಟಿಲ್ಲ. ಶಿವಕುಮಾರ್ ಡಿಸಿಎಂ ಆಗಿ ಹಣ ತಂದ್ರು ಕಲ್ಲು ನೆಟ್ಟಿದ್ದಾರೆ. ಮೇಕೆದಾಟು ಯೋಜನೆ ಜಾರಿ ಮಾಡ್ತೀನಿ ಅಂದ್ರು, ಯಾಕೆ ಮಾಡಿಲ್ಲ ಈಗ ಕೇಂದ್ರ ಸಚಿವರಾಗಿದ್ದಾರೆ ಮಾಡಲಿ" ಎಂದು ಒತ್ತಾಯಿಸಿದರು.