ಕರ್ನಾಟಕ

karnataka

ETV Bharat / state

ಡಿಕೆಶಿ ವಿರುದ್ಧ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವುದರಲ್ಲಿ ಕಾನೂನು ಉಲ್ಲಂಘನೆ ಇಲ್ಲ: ಅರ್ಜಿ ವಜಾಗೊಳಿಸಲು ಮನವಿ - HIGH COURT

ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸರ್ಕಾರದ ಪರವಾಗಿ ವಕೀಲ ಕಪಿಲ್ ಸಿಬಲ್ ಹೈಕೋರ್ಟ್​ನಲ್ಲಿ ವಾದ ಮಂಡಿಸಿದರು.

ಹೈಕೋರ್ಟ್​
ಹೈಕೋರ್ಟ್​ (ETV Bharat)

By ETV Bharat Karnataka Team

Published : May 27, 2024, 4:57 PM IST

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಸಮ್ಮತಿ ನೀಡುವಾಗ ಯಾವ ಸೆಕ್ಷನ್‌ಗಳ ಅಡಿ ಅಪರಾಧವಿದೆ ಎಂದು ತಿಳಿಸಿಲ್ಲ. ಗಣರಾಜ್ಯ ಪದ್ಧತಿಯಲ್ಲಿನ ನಿಯಮಗಳನ್ನು ಪಾಲಿಸಿಲ್ಲ. ಸಮ್ಮತಿ ನೀಡಿದ ಕ್ರಮವೇ ಕಾನೂನುಬಾಹಿರವಾಗಿದೆ. ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಪೀಠಕ್ಕೆ ಕೋರಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚಿಸಿದ್ದ ಸಮ್ಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅಲ್ಲದೆ, ಈ ಹಿಂದೆ ಸರ್ಕಾರ ನೀಡಿರುವ ಸಮ್ಮತಿ ರಾಜಕೀಯ ಪ್ರೇರಿತವಾಗಿದೆ. ಅಂದಿನ ಮುಖ್ಯಮಂತ್ರಿಗಳ ಮೌಖಿಕ ಹೇಳಿಕೆಯನ್ನು ಆಧರಿಸಿ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಆರೋಪ ಸಂಬಂಧ ತನಿಖಾಧಿಕಾರಿಗಳು ನಿರ್ಧರಿಸಬೇಕು, ಮುಖ್ಯಮಂತ್ರಿ, ಪ್ರಧಾನಮಂತ್ರಿ ತಿಳಿಸಿದ್ದಾರೆ ಎಂಬ ಕಾರಣದಿಂದ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಸಿಬಿಐ ತನಿಖೆಗೆ ಸಮ್ಮತಿ ನೀಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಸಮ್ಮತಿ ನೀಡಿದ ನಂತರ ದೆಹಲಿ ಪೊಲೀಸ್ ಎಸ್ಟಾಬ್ಲಿಷ್​ಮೆಂಟ್ ಕಾಯ್ದೆ ಸೆಕ್ಷನ್ ಅಡಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸುವ ಮುನ್ನ ವಿವೇಚನೆ ಬಳಸಿಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

ಡಿ.ಕೆ. ಶಿವಕುಮಾರ್ ಪರ ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಸಿಬಿಐ ತನಿಖೆಗೆ ಸರ್ಕಾರ ಸಮ್ಮತಿ ನೀಡುವುದು ಅತ್ಯಗತ್ಯ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಹೈಕೋರ್ಟ್ ನಿರ್ದೇಶನ ನೀಡಬಹುದಾಗಿದೆ. ಕರ್ನಾಟಕದಲ್ಲಿ ತನಿಖೆ ನಡೆಸಲು ಸಿಬಿಐಗೆ ಅಧಿಕಾರವಿಲ್ಲ. ಒಕ್ಕೂಟ ವ್ಯವಸ್ಥೆ ಸಂವಿಧಾನದ ಅತ್ಯಗತ್ಯ ಭಾಗವಾಗಿದೆ. ಮೊದಲು ಕೇಂದ್ರ ನಂತರ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಬೇಕು. ಕೇಂದ್ರ ಅನುಮತಿ ನೀಡಿದರೂ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೇ ತನಿಖೆ ನಡೆಸುವುದಕ್ಕೆ ಅವಕಾಶವೇ ಇಲ್ಲ ಎಂದು ವಿವರಿಸಿದರು.

ಅಲ್ಲದೆ, ಸಿಬಿಐ ಕೇಂದ್ರ ಸರ್ಕಾರದ ಏಜೆಂಟ್ ನಂತೆ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಯಾವ ರಸ್ತೆಗೆ ಹೋಗಬೇಕು, ಯಾರ ಮನೆಗೆ ಹೋಗಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತಿದೆ. ಉಳಿದಂತೆ ತನಿಖೆಯನ್ನು ಮಾತ್ರ ಸಿಬಿಐ ನಡೆಸುತ್ತಿದೆ. ಹೀಗಾಗಿ ಸಿಬಿಐ ತನಿಖೆ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಸಿಬಿಐ ಪರ ವಾದ ಮಂಡಿಸಲು ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಪೀಠ ಮೇ 31ಕ್ಕೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್ ಪುತ್ರ ಆಕಾಶ್ ನ್ಯಾಯಾಲಯದಲ್ಲಿ ಹಾಜರಿದ್ದು, ವಾದಮಂಡನೆ ಆಲಿಸಿದರು.

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೆ ಆರೋಪ: ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ - Prajwal Revanna Videos Case

ABOUT THE AUTHOR

...view details