ಬೆಂಗಳೂರು: ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಒಂದಷ್ಟು ಮೊತ್ತದ ಬ್ಯಾಂಕ್ ಗ್ಯಾರಂಟಿ ಒದಗಿಸಬೇಕು ಎಂಬ ಷರತ್ತು ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯ 50 ಲಕ್ಷ ರೂ.ಗಳ ಬ್ಯಾಂಕ್ ಗ್ಯಾರಂಟಿ ಷರತ್ತು ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ವೈಭವ್ ರಾಜ್ ಉತ್ಸವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಕರಣ್‌ದೀಪ್ ಸಿಂಗ್ ಪ್ರಕರಣ ಸೇರಿದಂತೆ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಬ್ಯಾಂಕ್ ಗ್ಯಾರಂಟಿ ನೀಡುವ ಷರತ್ತುಗಳನ್ನು ವಿಧಿಸುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಈ ರೀತಿಯಲ್ಲಿ ಕಾನೂನಿನಲ್ಲಿ ಅವಕಾಶವಿಲ್ಲ. ಜಾಮೀನು ನೀಡಿದ ನಂತರ ಆರೋಪಿಗಳ ಬಿಡುಗಡೆಗೆ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸಂಬಂಧಪಟ್ಟ ನ್ಯಾಯಾಲಯವು ಒತ್ತಾಯಿಸುವಂತಿಲ್ಲ. ಬ್ಯಾಂಕ್ ಗ್ಯಾರಂಟಿಯನ್ನು ಹೊರತುಪಡಿಸಿ ಇತರ ಕಾನೂನುಬದ್ಧ ಷರತ್ತುಗಳನ್ನು ವಿಧಿಸಲು ಅವಕಾಶವಿರಲಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?: ವಿಮುಕ್ತಿ ಟ್ರಸ್ಟ್ಗೆ ಸೇರಿದ್ದ 1,08,50,000 ರೂ.ಗಳ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಡಾ.ಕಿರಣ್ ಕಮಲಾ ಎಂಬವರು ವೈಭವ್‌ರಾಜ್ ಉತ್ಸವ್ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಸಂಬಂಧ ಪೊಲೀಸರು ಐಪಿಸಿಯ ಸೆಕ್ಷನ್‌ನ ವಿವಿಧ ಸೆಕ್ಷಕ್ಷನ್‌ಗಳ ಅಡಿ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ 50 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು 1 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಷರತ್ತು ವಿಧಿಸಿ ಆದೇಶಿಸಿತ್ತು. ಅಲ್ಲದೇ, ಈ ಆದೇಶ ಜಾಮೀನಿನ ಮೇಲೆ ಬಿಡುಗಡೆಯಾದ ಮೂರು ತಿಂಗಳಲ್ಲಿ ಪಾಲನೆ ಮಾಡಬೇಕು ಎಂದು ತಿಳಿಸಿತ್ತು. ಇದಾದ ನಂತರ ಷರತ್ತುಗಳ ಸಡಿಲಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಬ್ಯಾಂಕ್ ಗ್ಯಾರಂಟಿ ಮೊತ್ತವನ್ನು 1 ಕೋಟಿ ರೂ.ಗಳಿಂದ 50 ಲಕ್ಷ ರೂ.ಗೆ ಕಡಿತಗೊಳಿಸಿತ್ತು. ಮತ್ತಷ್ಟು ಮೊತ್ತ ಕಡಿತಗೊಳಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ವೈಭವರಾಜ್ ಉತ್ಸವ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಮೂಡಬಿದಿರೆ ಚೌಟರ ಅರಮನೆ ಬಳಿ ಕಟ್ಟಡ ನಿರ್ಮಾಣ ವಿವಾದ; ಜು.24ರಂದು ಹೈಕೋರ್ಟ್ ಆದೇಶ - High Court