ಕರ್ನಾಟಕ

karnataka

ETV Bharat / state

ಹೊರ ಜಿಲ್ಲೆಗಳ ಸಂಚಾರಕ್ಕೆ ತೊಂದರೆಯಿಲ್ಲ; ಚಾರ್ಮಾಡಿ, ಮಡಿಕೇರಿ ಘಾಟ್ ರಸ್ತೆ ಮುಚ್ಚಿಲ್ಲ: ಡಿಸಿ ಮುಲ್ಲೈ ಮುಗಿಲನ್ - DC Mullai Muhilan - DC MULLAI MUHILAN

ದಕ್ಷಿಣ ಕನ್ನಡ ಜಿಲ್ಲೆಯ ಬೆಂಗಳೂರನ್ನು ಸಂಪರ್ಕಿಸುವ ಮೂರು ಘಾಟ್​ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿಲ್ಲದೇ ಇರುವ ಕಾರಣ ಇಲ್ಲಿಂದ ಬೆಂಗಳೂರಿಗೆ ಹೋಗುವವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ತಿಳಿಸಿದ್ದಾರೆ.

DC Mullai Muhilan visited Uppinangady
ಉಪ್ಪಿನಂಗಡಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ಭೇಟಿ (ETV Bharat)

By ETV Bharat Karnataka Team

Published : Jul 31, 2024, 10:20 PM IST

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ (ETV Bharat)

ಉಪ್ಪಿನಂಗಡಿ:"ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿತವಾಗುವಂತಹ ಸ್ಥಳಗಳಲ್ಲಿ ಕೆಸರು ಮಿಶ್ರಿತ ನೀರು ಬರುತ್ತಲೇ ಇದೆ. ಅದನ್ನು ತೆಗೆಸುತ್ತಲೇ ಒಂದೊಂದಾಗಿ ವಾಹನಗಳನ್ನು ಬಿಡುವ ವ್ಯವಸ್ಥೆ ಮಾಡಲಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗುವವರೆಗೆ ಈ ರೀತಿ ಮಾಡಬೇಕಾಗುತ್ತದೆ. ಚಾರ್ಮಾಡಿ ಘಾಟ್​ನಲ್ಲಿ ಘನ ವಾಹನಗಳ ಸಂಚಾರಕ್ಕೆ ಮಾತ್ರ ನಿರ್ಬಂಧಿಸಲಾಗಿದೆ. ಉಳಿದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಂಪಾಜೆ ಘಾಟಿಯೂ ವಾಹನಗಳ ಸಂಚಾರಕ್ಕೆ ತೆರೆದಿರುವುದರಿಂದ ದ.ಕ. ಜಿಲ್ಲೆಯಿಂದ ಬೆಂಗಳೂರು ಕಡೆಗೆ ತೆರಳುವವರಿಗೆ ಯಾವುದೇ ಸಮಸ್ಯೆಯಿಲ್ಲ" ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

"ನದಿ ಬದಿ, ಕಾಲು ಸೇತುವೆ ಸೇರಿದಂತೆ ಅಪಾಯದ ಸ್ಥಳಗಳಲ್ಲಿ ಮೋಜು - ಮಸ್ತಿ ಮಾಡುವವರಿಗೆ, ಸೆಲ್ಫಿ ತೆಗೆದು ಸಂಭ್ರಮ ಪಡುವವರಿಗಾಗಿ ಈಗಾಗಲೇ ಆ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಫಲಕಗಳನ್ನು ಹಾಕಲಾಗಿದೆ. ಇದು ಕೇವಲ ಎಚ್ಚರಿಕೆ ಅಲ್ಲ. ಕಾನೂನಾತ್ಮಕ ಆದೇಶವಾಗಿದ್ದು, ಇದನ್ನು ಉಲ್ಲಂಘಿಸಿದವರ ಮೇಲೆ ಎಫ್‌ಐಆ‌ರ್ ದಾಖಲು ಮಾಡಲಾಗುತ್ತದೆ" ಎಂದು ತಿಳಿಸಿದರು.

"ವಯನಾಡು ದುರಂತದಲ್ಲಿ ದ.ಕ. ಕನ್ನಡ ಜಿಲ್ಲೆಯವರು ಯಾರಾದರೂ ಸಿಕ್ಕಿ ಹಾಕಿಕೊಂಡಿದ್ದರ ಮಾಹಿತಿಯಿದ್ದರೆ ಜಿಲ್ಲಾಡಳಿತವನ್ನು ಸಂಪರ್ಕಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಯಾರಿಗಾದರೂ ಮಾಹಿತಿಗಳಿದ್ದಲ್ಲಿ ಅದನ್ನು ಜಿಲ್ಲಾ ಕಂಟ್ರೋಲ್ ರೂಂಗೆ ತಿಳಿಸಬಹುದು. ಆಗ ಕೇರಳ ಸರಕಾರ ಹಾಗೂ ಅಲ್ಲಿನ ಜಿಲ್ಲಾಡಳಿತವನ್ನು ಸಂಪರ್ಕಿಸಿ ಅವರ ರಕ್ಷಣಾ ಕಾರ್ಯಕ್ಕೆ ಮುಂದಾಗಬಹುದು" ಎಂದರು.

"24 ಗಂಟೆ ಜಲಾವೃತಗೊಂಡ ಮನೆಗಳಿಗೆ ಎನ್‌ಡಿಆರ್‌ಎಫ್‌ನಿಂದ 10 ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ. ಅಲ್ಲದೇ, ಸಂಪೂರ್ಣ ನಾಶವಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್., ಉಪ್ಪಿನಂಗಡಿ ಪಿಡಿಒ ವಿಗ್ರೇಡ್ ಲಾರೆನ್ಸ್ ರೊಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖ‌ರ್, ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್​ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯ 46 ಗ್ರಾಮಗಳು ಜಲಾವೃತ: ಐವರು ಸಾವು, 10,304 ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ - 46 villages of Belagavi are flooded

ABOUT THE AUTHOR

...view details