ಬೆಂಗಳೂರು: "ಕೆಳಹಂತದ ಜೈಲು ಸಿಬ್ಬಂದಿ ಅಮಾನತು ಮಾಡಿದರೆ ಪ್ರಯೋಜನ ಇಲ್ಲ. ದೊಡ್ಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂಥ ಘಟನೆಗಳು ಮರುಕಳಿಸುವುದಿಲ್ಲ" ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, "ನಟ ದರ್ಶನ್ಗೆ ರಾಜಾತಿಥ್ಯ ನೀಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಾವ ದೊಡ್ಡ ಅಧಿಕಾರಿ ಇದ್ದರೂ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಘಟನೆ ಮುಂದೆ ಆಗಲ್ಲ. ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಖಡಕ್ ಆಫೀಸರ್ ಗಳನ್ನು ಇಂಥ ಸ್ಥಳಕ್ಕೆ ನಿಯೋಜಿಸಬೇಕು. ಆಗ ಮಾತ್ರ ಈ ರೀತಿ ಘಟನೆಗಳು ಆಗಲ್ಲ. ಯಾರು ಸೌಲಭ್ಯ ಕೊಟ್ಟಿದ್ದಾರೆ ಎಂಬ ಬಗ್ಗೆ ಗೃಹ ಮಂತ್ರಿಗಳಿಗೆ ಗೊತ್ತಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಡಿಜಿ ಅವರಿಗೆ ಈ ವಿಚಾರಗಳೆಲ್ಲ ಗೊತ್ತಿರುವುದಿಲ್ಲ. ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕಿತ್ತು. ಜೈಲಿಗೆ ಭೇಟಿ ಕೊಡಬೇಕು. ಆಫೀಸರ್ ಕರೆದು ವಾರ್ನ್ ಮಾಡಬೇಕಿತ್ತು" ಎಂದರು.
"ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ಘಟನೆ ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಇದು ರಾಜ್ಯ ಸರ್ಕಾರದ ಹೊಣೆಯಲ್ಲ. ಆದರೆ, ಲೋಪ ಆಗಿರೋದು ನಿಜ. ಅಲ್ಲಿ ಫೋನ್ ಇಟ್ಕೊಂಡಿರುವುದು ಲೋಪ ಆಗಿದೆ. ಎಲ್ಲೋ ಒಂದು ಕಡೆ ರೈಲು ಅಪಘಾತ ಆಗುತ್ತೆ. ರೈಲ್ವೆ ಸಚಿವ ರಾಜೀನಾಮೆ ಕೇಳೋಕೆ ಆಗುತ್ತಾ?. ಎಲ್ಲೋ ಜೈಲಲ್ಲಿ ಇಂತಹ ಘಟನೆಯಾದಾಗ ಗೃಹ ಮಂತ್ರಿ ರಾಜೀನಾಮೆ ಕೊಟ್ಟರೆ, ದೇಶದಲ್ಲಿರುವ ಯಾವ ಸರ್ಕಾರ, ಯಾವ ಮಂತ್ರಿಗಳು ಕೂಡ ಕೆಲಸ ಮಾಡಲು ಸಾಧ್ಯವಿಲ್ಲ" ಎಂದರು.