ಕರ್ನಾಟಕ

karnataka

ETV Bharat / state

ಸಿ.ಟಿ.ರವಿ ಘಟನೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ: ಸಚಿವ ಸತೀಶ ಜಾರಕಿಹೊಳಿ - SATISH JARKIHOLI STATEMENT

ಹೋದ ಎಲ್ಲ ಕಡೆಯೂ ಬಿಜೆಪಿಯವರು ಪ್ರತಿಭಟನೆ ಮಾಡಲು ಶುರು ಮಾಡಿದ ಕಾರಣ ಸಿ ಟಿ ರವಿ ಅವರನ್ನು ಒಂದು ಠಾಣೆಯಿಂದ ಒಂದು ಠಾಣೆಗೆ ಕರೆದುಕೊಂಡು ಹೋಗಬೇಕಾಯಿತು ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

Minister Satish Jarkiholi
ಸಚಿವ ಸತೀಶ ಜಾರಕಿಹೊಳಿ (ETV Bharat)

By ETV Bharat Karnataka Team

Published : 16 hours ago

ಬೆಳಗಾವಿ: ವಿಧಾನಪರಿಷತ್ ಸದಸ್ಯ ಸಿ. ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, "ಘಟನೆ ಆಗಿ ಹೋಗಿದೆ. ಮತ್ತೆ ಅದನ್ನು ಮುಂದುವರಿಸುವುದರಲ್ಲಿ ಅರ್ಥ‌ ಇಲ್ಲ" ಎಂದು ಹೇಳಿದರು.

ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಇಂಥ ಘಟನೆಗಳು ಹೊಸದೇನಲ್ಲ. ಸಂಸತ್ತು ವಿಧಾನಸಭೆಯಲ್ಲಿ ನಡೆದಿವೆ. ಕ್ಷಮೆ ಕೇಳಿದ ಬಳಿಕ ಅವು ಮುಗಿದು ಹೋಗಿವೆ. ಈಗಲೂ ಈ ಪ್ರಕರಣ ಮುಗಿಸೋದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನಾವಶ್ಯಕ" ‌ಎಂದರು.

ಸಚಿವ ಸತೀಶ ಜಾರಕಿಹೊಳಿ (ETV Bharat)

ನನ್ನನ್ನು ಪೊಲೀಸರು ಎನ್‌ಕೌಂಟರ್ ಮಾಡೋ ಸಂಚು ರೂಪಿಸಿದ್ದರು ಎಂಬ ಸಿ. ಟಿ ರವಿ ಆರೋಪದ ಕುರಿತು ಪ್ರತಿಕ್ರಿಯಿಸಿ, "ಸಿ. ಟಿ ರವಿ ಓರ್ವ ಶಾಸಕ, ಅವರನ್ನು ಹೇಗೆ ಎನ್‌ಕೌಂಟರ್ ಮಾಡಲು ಸಾಧ್ಯ. ಸಿ.ಟಿ ರವಿಗೆ ತೊಂದರೆ ಕೊಡಬೇಕು ಎಂದು ಪೊಲೀಸರು ಠಾಣೆಯಿಂದ ಠಾಣೆಗೆ ಸುತ್ತಾಡಿಸಿಲ್ಲ. ಹೋದ ಎಲ್ಲ ಕಡೆಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಲು ಶುರು ಮಾಡಿದ್ದರು. ಈ ಕಾರಣಕ್ಕೆ ‌ಠಾಣೆಯಿಂದ ಠಾಣೆಗೆ ಕರೆದೊಯ್ದಿದ್ದಾರೆ" ಎಂದು ಸಮರ್ಥಿಸಿಕೊಂಡರು.

"ಸಿ.ಟಿ. ರವಿ ಅವರೇ ನಾನು ಆ ಪದ ಬಳಸಿಲ್ಲ ಎಂದು ಹೇಳಿದ್ದಾರೆ. ಅವರೇ ಹಾಗೇ ಹೇಳಿದ ಮೇಲೆ ಈ ಪ್ರಕರಣ ಮುಂದುವರಿಸುವುದರಲ್ಲಿ ಅರ್ಥ ಇಲ್ಲ" ಎಂದ ಸತೀಶ ಜಾರಕಿಹೊಳಿ, "ಸೌಧಕ್ಕೆ ನುಗ್ಗಿ ಸಿ.ಟಿ ರವಿ ಮೇಲೆ ಹಲ್ಲೆ ಯತ್ನ ನಡೆದಾಗ ಸಿ.ಟಿ ರವಿಯನ್ನು ಮಾರ್ಷಲ್​ಗಳು ರಕ್ಷಿಸಿದ್ದಾರೆ. ಸೌಧದ ಒಳಗೆ ಅನೇಕ ಕಾರ್ಯಕರ್ತರು ಇರ್ತಾರೆ, ಇವರೇ ಅಂತಾ ಹೇಳುವುದು ಕಷ್ಟ" ಎಂದರು.

"ದೂರು ದಾಖಲಾದ ಬಳಿಕವೇ ಸಿ. ಟಿ. ರವಿ ಬಂಧನವಾಗಿದೆ. ಸಿ. ಟಿ. ರವಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಶಿಫ್ಟ್ ಮಾಡಿದರು. ಯಾರ ನಿರ್ದೇಶನದ ಮೇರೆಗೆ ಸಿ. ಟಿ ರವಿಯನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ನಂಗೆ ಗೊತ್ತಿಲ್ಲ. ಸಿ.ಟಿ ರವಿಯನ್ನು ರಾತ್ರಿಯೇ ಕೋರ್ಟ್‌ಗೆ ಹಾಜರು ಮಾಡುವಂತೆ‌ ನಾನು ಪೊಲೀಸರಿಗೆ ಹೇಳಿದೆ. ಬೆಳಗಾವಿ ‌ಪೊಲೀಸರು ಅಷ್ಟು ಮಾಡಿದ್ದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಸುವರ್ಣಸೌಧದಲ್ಲಿ ನಡೆದ ಮೊದಲ ಘಟನೆ ಇದು. ಹೀಗಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿವೆ" ಎಂದು ತಿಳಿಸಿದರು.

ಇದನ್ನೂ ಓದಿ:ಸಿ ಟಿ ರವಿ ಬಂಧನ, ಬಿಡುಗಡೆ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯೆ ಹೀಗಿದೆ

ABOUT THE AUTHOR

...view details