ಬೆಂಗಳೂರು:''ಮುಂಬೈ ಸೇರಿದಂತೆ ಇತರ ಪ್ರಮುಖ ನಗರಗಳು ಎರಡು ವಿಮಾನ ನಿಲ್ದಾಣಗಳನ್ನು ಹೊಂದಿರುವಂತೆ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ. ಆದರೆ, ಸ್ಥಳವನ್ನು ಅಂತಿಮಗೊಳಿಸಿಲ್ಲ. ರಾಜ್ಯ ಮತ್ತು ಬೆಂಗಳೂರಿನ ಹಿತಾಸಕ್ತಿಗೆ ಪೂರಕವಾಗಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ'' ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬೆಂಗಳೂರು ಹೊರತಾಗಿ ಬೇರೆ ಕಡೆ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶದ ಬಗ್ಗೆ ಸಚಿವರು ಹೇಳಿದ್ದಾರೆ. ತುಮಕೂರು ಮತ್ತು ಚಿತ್ರದುರ್ಗದ ಮಧ್ಯೆ ನಿರ್ಮಾಣ ಮಾಡುವ ಯೋಜನೆ ಇದೆಯಾ ಎನ್ನುವ ಕುರಿತ ಬಿಜೆಪಿ ಸದಸ್ಯ ನವೀನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಆ ರೀತಿಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಬೆಂಗಳೂರಿಗೆ 2 ನೇ ವಿಮಾನ ನಿಲ್ದಾಣ ಮಾಡುವ ಪ್ಲಾನ್ ಇದೆ. ನಮಗೆ 2033 ರವರೆಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವಕಾಶ ಇದೆ. ಆ ನಂತರ ನಾವು ವಿಮಾನ ನಿಲ್ದಾಣ ಮಾಡಬಹುದು'' ಎಂದರು.