ಹಾವೇರಿ:ಧಾರವಾಡದಲ್ಲಿ ನಿಂತು ಕಲ್ಲು ಹೊಡೆದರೆ ಆ ಕಲ್ಲು ಸಾಹಿತಿಗಳ ಮನೆ ಮೇಲೆ ಬೀಳುತ್ತದೆ. ಗದಗದಲ್ಲಿ ನಿಂತು ಕಲ್ಲು ಹೊಡೆದರೆ ಅದು ಪ್ರಕಾಶಕರ ಮನೆ ಮೇಲೆ ಬೀಳುತ್ತೆ ಎನ್ನುವ ಮಾತಿದೆ. ನೀವೇನಾದಾರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ನಿಂತು ಕಲ್ಲು ಹೊಡೆದರೆ ಅದು ಕಲಾವಿದರ ಮನೆ ಮೇಲೆ ಬೀಳುತ್ತೆ ಎನ್ನುವ ಮಾತು ಇದೀಗ ಜನಜನಿತವಾಗಿದೆ.
ಇದಕ್ಕೆ ಕಾರಣ ಶೇಷಗಿರಿಯ ಪ್ರತಿಮನೆಯಲ್ಲಿ ಒಬ್ಬರು ಕಲಾವಿದರಿದ್ದಾರೆ. ಕೆಲವು ಮನೆಗಳಲ್ಲಿ ಇಬ್ಬರು ಸದಸ್ಯರು ಕಲಾವಿದರು ಇರುವ ಕಲಾವಿದ ಕುಟುಂಬಗಳು ಇಲ್ಲಿವೆ. ಈಗ ಕಲಾವಿದರ ಗ್ರಾಮ ಎಂದು ಕರೆಸಿಕೊಳ್ಳುವ ಶೇಷಗಿರಿ ಸುಮಾರು ಐದು ದಶಕಗಳ ಹಿಂದೆ ಕುಗ್ರಾಮವಾಗಿತ್ತು. ಶಾಲೆ, ಆಸ್ಪತ್ರೆ, ಬ್ಯಾಂಕ್ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಗ್ರಾಮಸ್ಥರು ದೂರ ದೂರದ ಊರುಗಳಿಗೆ ತೆರಳುವ ಅನಿವಾರ್ಯತೆ ಇತ್ತು.
ಕಲಾಗ್ರಾಮವಾಗಿ ಬದಲಾಯ್ತು ಕುಗ್ರಾಮ; ಆದರೆ ಗ್ರಾಮಕ್ಕೆ ಅದೇ ಗ್ರಾಮದ ಪ್ರಭು ಗುರಪ್ಪನವರ್ ಪೋಸ್ಟ್ ಮಾಸ್ಟರ್ ಆಗಿ ಬಂದರು. ಗ್ರಾಮದ ದುಸ್ಥಿತಿ ನೋಡಿ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂದು ಮುಂದಾದರು. 1983 ರಲ್ಲಿ ಗ್ರಾಮದಲ್ಲಿ 'ಗಜಾನನ ಯುವಕ ಮಂಡಳ - ಶೇಷಗಿರಿ' ರಚಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪಣತೊಟ್ಟರು. ಕುಗ್ರಾಮವಾಗಿದ್ದ ಶೇಷಗಿರಿ ಗ್ರಾಮದಲ್ಲಿ ಸುಸಜ್ಜಿತ ಪ್ರೌಢಶಾಲೆ, ಎಂಬಿಬಿಎಸ್ ವೈದ್ಯರಿರುವ ಆಸ್ಪತ್ರೆ, ಬ್ಯಾಂಕ್ ಆರಂಭವಾದವು.
ರಸ್ತೆಗಳು ಸುಧಾರಿಸಿದವು, ಗ್ರಾಮಸ್ಥರಲ್ಲಿ ಸ್ವಚ್ಛತೆ ಅರಿವು ಮೂಡಿತು. ಇದರ ಜೊತೆಗೆ ಮೂಢನಂಬಿಕೆಗಳು ಮೂಲೆಗುಂಪಾದವು. ಇತ್ತ ಸಾಕ್ಷರತಾ ಆಂದೋಲನಾ ಗ್ರಂಥಾಲಯ ಸಪ್ತಾಹಗಳು ಶೇಷಗಿರಿ ಗ್ರಾಮಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡಿದವು. ಪ್ರಭು ಗುರಪ್ಪನವರ ಗ್ರಾಮಸ್ಥರಲ್ಲಿ ಪರಿಸರ ಪ್ರೇಮ ಬೆಳೆಸಿದರು. ಗ್ರಾಮದ ರಸ್ತೆಗಳ ಇಕ್ಕೆಲಗಳಲ್ಲಿ ಗಿಡನೆಟ್ಟು ಅವುಗಳ ಪೋಷಣೆಗೆ ಗ್ರಾಮಸ್ಥರು ಮುಂದಾದರು. ಒಂದು ಕಾಲದಲ್ಲಿ ಕುಗ್ರಾಮವಾಗಿದ್ದ ಶೇಷಗಿರಿಯಲ್ಲಿ ಸುಸಜ್ಜಿತ ಆಸ್ಪತ್ರೆ, ಸುಸಜ್ಜಿತ ಗ್ರಂಥಾಲಯ, ಪ್ರಾಥಮಿಕ ಪ್ರೌಢಶಾಲೆ, ಬಸ್ ನಿಲ್ದಾಣ, ಬ್ಯಾಂಕ್‌ಗಳ ನಿರ್ಮಾಣದಿಂದ ಅಕ್ಕಪಕ್ಕದ ಗ್ರಾಮಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಗ್ರಾಮದಲ್ಲಿ ಯುವಕ ಮಂಡಳ ಹುಟ್ಟುಹಾಕಿ ಗ್ರಾಮದ ಅಭಿವೃದ್ಧಿಯಲ್ಲಿ ನಿರತರಾಗಿದ್ದ ಪ್ರಭು ಗುರಪ್ಪನವರ್ ಸ್ವತಃ ಕಲಾವಿದರಾಗಿದ್ದು, ನಾಟಕ ರಚಿಸಿ ನಿರ್ದೇಶಿಸಿ ಅಭಿನಯಿಸಿದರು. ತಮ್ಮ ನಾಟಕಗಳಿಗೆ ಗ್ರಾಮದ ಜನರನ್ನು ಕಲಾವಿದರನ್ನಾಗಿ ಮಾಡಿಕೊಂಡು ಪ್ರದರ್ಶನ ನೀಡಿದರು. ಜೊತೆಗೆ ಇವರಿಗೆ ಹಾವೇರಿಯ ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಸಾಥ್ ನೀಡಿದರು. 1992ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಲಾಗ್ರಾಮ ಹೆಗ್ಗೋಡಿಗೆ ಭೇಟಿ ನೀಡಿದರು. ನೀನಾಸಂ ಸಾಂಸ್ಕೃತಿಕ ಶಿಬಿರದಲ್ಲಿ ಪಾಲ್ಗೊಂಡ ಪ್ರಭು ಗುರಪ್ಪನವರ ಅಲ್ಲಿಯ ರಂಗಚಟುವಟಿಕೆಗಳು ಮತ್ತು ರಂಗಮಂದಿರ ನೋಡಿ ಬೆರಗಾದರು. ಶೇಷಗಿರಿಯಲ್ಲೂ ಸಹ ರಂಗಮಂದಿರ ಸ್ಥಾಪಿಸುವ ಕನಸು ಕಂಡರು.
ಗ್ರಾಮಕ್ಕೆ ಬಂದ ಪ್ರಭು ಗುರಪ್ಪನವರ್ ತಮ್ಮ ಗಜಾನನ ಯುವಕ ಮಂಡಳದ ಸದಸ್ಯರಲ್ಲಿ ಕಲಾವಿದರನ್ನು ಗುರುತಿಸಿದರು. ತಾವೇ ಸ್ವತಃ ನಾಟಕ ರಚಿಸಿ, ನಿರ್ದೇಶಿಸಿ ಈ ಗ್ರಾಮದಲ್ಲಿರುವ ಬಯಲುಮಂದಿರದಲ್ಲಿ ಪ್ರದರ್ಶನ ನೀಡಿದರು. ಬೀದಿನಾಟಕ ಬಂಡಾಯ ನಾಟಕಗಳನ್ನು ಬರೆದು ನಿರ್ದೇಶಿಸಿದರು. ಬಯಲುರಂಗಮಂದಿರದ ಜೊತೆಗೆ ತಾವೇ ಸ್ವತಃ ಹಣ ಹಾಕಿ ಭೂಮಿ ಖರೀದಿಸಿ ರಂಗಮಂದಿರ ನಿರ್ಮಿಸಲು ಮುಂದಾದರು. ಅಂದು ಸ್ಥಳೀಯ ಶಾಸಕರಾಗಿದ್ದ ದಿವಂಗತ ಸಿ.ಎಂ. ಉದಾಸಿ ಅವರಿಂದ ಅನುದಾನ ಪಡೆದು ಗ್ರಾಮದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಆರಂಭವಾಯಿತು.
ಹಲವು ಕಡೆಗಳಲ್ಲಿ ನಾಟಕಗಳ ಪ್ರದರ್ಶನ; ಇಲ್ಲಿಯ ಕಲಾವಿದರಿಂದ ಅಭಿನಯಸಲ್ಪಟ್ಟ ನಾಟಕಗಳು ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ಪ್ರದರ್ಶನಗೊಂಡಿವೆ. ಮುಂಬೈ ದೆಹಲಿ ರಂಗಮಂದಿರಗಳಲ್ಲಿ ಪ್ರದರ್ಶನ ಕಂಡಿವೆ. ಇತ್ತೀಚಿಗೆ ಗಜಾನನ ಯುವಕ ಮಂಡಳಿ ಪ್ರದರ್ಶಿಸಿದ ವಾಲಿವಧೆ ನಾಟಕ ಬಹುಬೇಡಿಕೆಯ ನಾಟಕವಾಗಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ಪ್ರದರ್ಶನಗಳನ್ನು ಕಂಡು ವಾಲಿವಧೆ ನಾಟಕದ ಪ್ರವೇಶ ಟಿಕೇಟ್‌ಗಳು ಸಿಗದ ಪ್ರೇಕ್ಷಕರು ಮುಂಗಡವಾಗಿ ಬುಕ್ಕಿಂಗ್ ಮಾಡಿದ ಉದಾಹರಣಿಗಳಿವೆ.