ದಾವಣಗೆರೆ:ಜಿಲ್ಲೆಯ ಮಾಯಕೊಂಡ ಗ್ರಾಮದಲ್ಲಿ ಕಳ್ಳರ ಕಾಟ ದಿನೇ ದಿನೇ ಹೆಚ್ಚಾಗಿದ್ದು, ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಕಳ್ಳರನ್ನು ಮಟ್ಟಹಾಕಲು ಪೊಲೀಸರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ಮನವಿ ಮೆರೆಗೆ ಪಂಚಾಯಿತಿಯವರು ಸುಮಾರು 84 ಸಾವಿರ ರೂಪಾಯಿ ವ್ಯಯಿಸಿ 8-10 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇದರ ಪರಿಣಾಮ, ಸ್ವಲ್ಪ ಮಟ್ಟಿಗೆ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ ಎಂದು ಪಿಡಿಒ ತಿಳಿಸಿದ್ದಾರೆ.
ಮಾಯಕೊಂಡ ಗ್ರಾಮದಲ್ಲಿ ಗ್ರಾಮಸ್ಥರು ಕುರಿ, ಕೋಳಿ, ಆಕಳು ಸೇರಿದಂತೆ ಜಾನುವಾರುಗಳನ್ನು ಸಾಕಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು. ಜನ ಸಾಕಲು ತಂದ ಜಾನುವಾರುಗಳು ಕಳ್ಳರ ಪಾಲಾಗುತ್ತಿವೆ. ಅಲ್ಲದೇ ಮನೆಗಳಿಗೂ ಕನ್ನ ಹಾಕುತ್ತಿದ್ದಾರೆ. 9,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕುರಿಗಳು, ಜಮೀನಿನಲ್ಲಿ ಮೋಟರ್ಗೆ ಅಳವಡಿಸಿದ ಕೇಬಲ್, ಮೋಟರ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಖದೀಮರು ದೋಚಿಕೊಂಡು ಪರಾರಿಯಾಗುತ್ತಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮಸ್ಥರು, ಮಾಯಕೊಂಡ ಗ್ರಾಮದಲ್ಲಿರುವ ರೈಲ್ವೆ ನಿಲ್ಧಾಣ, ಬಸ್ ನಿಲ್ದಾಣ, ದೊಡ್ಡಿ ಮನೆ, ಬಾವಿಹಾಳ್ ರಸ್ತೆ, ಸಂತೆಬೈಲ್, ಬಾವಿಹಾಳ್ ರಸ್ತೆ, ಹಿರೇ ಮದಕರಿನಾಯ್ಕ ಸಮಾಧಿ ಸೇರಿದಂತೆ ಹಲವೆಡೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿದ್ದಾರೆ.
ಈ ಕುರಿತು ಗ್ರಾಮದ ಮುಖಂಡ ಅಶೋಕ ಗೌಡ ಪ್ರತಿಕ್ರಿಯಿಸಿ, "ಕಳ್ಳರ ಕಾಟದಿಂದ ರೈತರು ಕುರಿ ದನ, ಆಕಳು ಸಾಕಲು ಹಿಂದೇಟು ಹಾಕುವಂತಾಗಿದೆ. ಜಮೀನಿನಲ್ಲಿರುವ ಮೋಟರ್, ಐಪಿ ಸೆಟ್ಗಳು, ಕೇಬಲ್ ಅನ್ನೂ ಬಿಡ್ತಿಲ್ಲ. ಇದರಿಂದಾಗಿ ನಾವು ಹೇಗೆ ಬದುಕು ನಡೆಸಬೇಕೆಂದೇ ತಿಳಿಯುತ್ತಿಲ್ಲ. ಪ್ರತಿಭಟನೆ ಮಾಡಿ ನಾವೇ ಸಿಸಿ ಕ್ಯಾಮೆರಾಗಳನ್ನು ಹಾಕಿಸುವಂತೆ ಮಾಡಿದ್ದೇವೆ. ಆದ್ರೂ ಸಹ ಇದರಿಂದ ಪ್ರಯೋಜನವಾಗ್ತಿಲ್ಲ. ಕಳ್ಳರನ್ನು ಹಿಡಿದರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು" ಎಂದರು.