ಬೆಳಗಾವಿ:ಕ್ರಾಂತಿಯ ನೆಲ ಬೈಲಹೊಂಗಲದಲ್ಲಿರುವ ಐತಿಹಾಸಿಕ ಬಾವಿ ಕಿತ್ತೂರು ಸಂಸ್ಥಾನದ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದೆ. ವೀರರಾಣಿ ಚನ್ನಮ್ಮ ಸತತ ಐದು ವರ್ಷಗಳ ಕಾಲ ಅಂದರೆ ತನ್ನ ಜೀವಿತದ ಕೊನೆ ಘಳಿಗೆವರೆಗೆ ಬಳಸಿದ ಬಾವಿ ಇದಾಗಿದ್ದು, ಇದನ್ನು ಉಳಿಸಲು ಜಿಲ್ಲಾಡಳಿತ, ಸರ್ಕಾರ ಮನಸ್ಸು ಮಾಡಬೇಕಿದೆ.
ಬ್ರಿಟಿಷರ ವಿರುದ್ಧ ಎರಡನೇ ಯುದ್ಧದಲ್ಲಿ ಸೋಲಾದ ಬಳಿಕ ರಾಣಿ ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಕಿತ್ತೂರು ಸಂಸ್ಥಾನಕ್ಕೆ ಸೇರಿದ ವಾಡೆಯಲ್ಲೇ ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ವೇಳೆ ಚನ್ನಮ್ಮ ಸ್ನಾನಕ್ಕೆ, ಕುಡಿಯಲು, ಪೂಜೆಗೆ ಇದೇ ಬಾವಿಯ ನೀರನ್ನು ಬಳಸಿದ್ದರು. ಸದ್ಯ ಇಂದಿನ ಬೈಲಹೊಂಗಲ ಪಟ್ಟಣದ ಹುಡೇದ ಗಲ್ಲಿಯಲ್ಲಿರುವ ಈ ಬಾವಿಗೆ "ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಬಾವಿ" ಎಂದು ಕರೆಯಲಾಗುತ್ತಿದೆ. ನಿರ್ವಹಣೆ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಬಾವಿ ಈಗ ಅವಸಾನದ ಅಂಚಿಗೆ ತಲುಪಿದೆ.
ನಿರ್ಲಕ್ಷ್ಯಕ್ಕೊಳಗಾದ ಬೈಲಹೊಂಗಲದ ಬಾವಿ (ETV Bharat) ಅಧಿಕಾರಿಗಳು ಇತ್ತ ಗಮನಹರಿಸದ ಹಿನ್ನೆಲೆಯಲ್ಲಿ ಬಾವಿಯ ಸುತ್ತಲಿನ ಗೋಡೆ ಕುಸಿಯುವ ಸ್ಥಿತಿಯಲ್ಲಿದೆ. ತಕ್ಷಣವೇ ಬಾವಿ ಸಂರಕ್ಷಿಸುವ ಕೆಲಸ ಆಗಬೇಕು. ಇನ್ನು ಬಾವಿಯಲ್ಲಿ ಕಸ, ಕಡ್ಡಿಗಳು ತುಂಬಿದ್ದು, ಸ್ವಚ್ಛತೆ ಕೈಗೊಳ್ಳಬೇಕು. ಬಾವಿಯ ಹಿಂಭಾಗದಲ್ಲಿ ಚನ್ನಮ್ಮನ ಸುಂದರ ಪುತ್ಥಳಿ ಪ್ರತಿಷ್ಠಾಪಿಸಿ, ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ.
ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಬಾವಿ (ETV Bharat) ಕಿತ್ತೂರಿನಲ್ಲಿ ಬೃಹದಾಕಾರದ ಕೋಟೆ ಮತ್ತು ಅರಮನೆ ನಿರ್ಮಿಸಿದ್ದ ರಾಜಾ ಅಲ್ಲಪ್ಪಗೌಡ ದೇಸಾಯಿ ಕಾಲದಲ್ಲೇ ಬೈಲಹೊಂಗಲದಲ್ಲೂ ಒಂದು ಕೋಟೆ ಮತ್ತು ಅರಮನೆ ನಿರ್ಮಿಸಲಾಗಿತ್ತು. ಇಲ್ಲಿ ನೀರು ಪೂರೈಕೆಗಾಗಿ ತೋಡಿದ್ದೇ ಈ ಬಾವಿ. ಚೌಕಾಕಾರದಲ್ಲಿರುವ ಕಲ್ಲಿನ ಬಾವಿಯಲ್ಲಿ ಎರಡು ಬದಿಯಲ್ಲಿ ಕಮಾನುಗಳಿವೆ. ಬಾವಿಯನ್ನು ಸುಣ್ಣ, ಬೆಲ್ಲ ಮಿಶ್ರಿತ ಗಚ್ಚಿನಿಂದ ನಿರ್ಮಿಸಲಾಗಿದೆ. ಬಾವಿಯೊಳಗೆ ಸುರಂಗ ಮಾರ್ಗವಿದೆ. ಈಗಲೂ ಬಾವಿ ನೀರಿನಿಂದ ತುಂಬಿದ್ದು, ಇದಕ್ಕೆ ಮತ್ತೆ ಸುತ್ತಲಿನ 18 ಬಾವಿಗಳ ಸಂಪರ್ಕವಿದೆ. ಹಾಗಾಗಿ, ಈ ಬಾವಿ ಬತ್ತಿದ್ದನ್ನು ನಾವು ನೋಡಿಯೇ ಇಲ್ಲ ಎನ್ನುತ್ತಾರೆ ಸ್ಥಳೀಯರು.
ರಾಣಿ ಚನ್ನಮ್ಮ ಬಳಸಿದ ಬಾವಿ (ETV Bharat) ಸಮಾಜಸೇವಕ ರಫೀಕ್ ಬಡೇಘರ 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಚನ್ನಮ್ಮ ತಾಯಿಯನ್ನು ಗೃಹಬಂಧನದಲ್ಲಿ ಇರಿಸಿದಾಗ ಸತತವಾಗಿ ಐದು ವರ್ಷ ಅಂದರೆ ಲಿಂಗೈಕ್ಯ ಆಗುವವರೆಗೂ ಬಳಸಿದ ಪವಿತ್ರ ಬಾವಿ ಇದು. ಕೋಟೆಯಂತೂ ಅತಿಕ್ರಮಣವಾಗಿ ಹಾಳಾಗಿ ಹೋಗಿದೆ. ಈಗ ಉಳಿದಿರೋದು ಚನ್ನಮ್ಮನ ಸಮಾಧಿ ಮತ್ತು ಈ ಸ್ಮಾರಕ ಬಾವಿ. ಇವು ಮುಂದಿನ ಪೀಳಿಗೆಗೆ ಗುರುತು ಉಳಿಯುವಂತೆ ಅಭಿವೃದ್ಧಿ ಪಡಿಸಬೇಕು. ಬಾವಿಯ ಮುಂದಿನ ಭಾಗದಲ್ಲಿ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಆದರೆ, ಬಾವಿಯ ಒಳಭಾಗದಲ್ಲೂ ಕೆಲಸ ಆಗಬೇಕಿದೆ. ಮೇಲೆ ತಗಡಿನ ಶೆಡ್ ಹಾಕಿದ್ದು ಸರಿಯಲ್ಲ. ಕೂಡಲೇ ಚನ್ನಮ್ಮನ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ ಅದರಡಿ ಈ ಬಾವಿಯನ್ನು ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿದರು.
ರಾಣಿ ಚನ್ನಮ್ಮ ಬಳಸಿದ ಬಾವಿ (ETV Bharat) ಸಾಮಾಜಿಕ ಹೋರಾಟಗಾರ ಸಿ.ಕೆ. ಮೆಕ್ಕೇದ ಮಾತನಾಡಿ, ರಾಣಿ ಚನ್ನಮ್ಮ, ಸರ್ದಾರ ಗುರುಸಿದ್ದಪ್ಪ, ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕರ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದು, ರಾಜಕಾರಣಿಗಳು ಆಡಳಿತ ನಡೆಸುತ್ತಿದ್ದಾರೆ. ನಾವೇ ಹಣ ಹೊಂದಿಸಿ ಇದನ್ನು ಅಭಿವೃದ್ಧಿ ಪಡಿಸಬೇಕೋ ಅಥವಾ ಸರ್ಕಾರ ಮಾಡುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಮುಂದಿನ ವರ್ಷದ ಕಿತ್ತೂರು ಉತ್ಸವದೊಳಗೆ ಚನ್ನಮ್ಮನ ಸಮಾಧಿ, ಬಾವಿ ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋಟೆ ಕಣ್ಮರೆ:ಬೈಲಹೊಂಗಲ್ಲಿದ್ದ ಕಿತ್ತೂರು ಸಂಸ್ಥಾನದ ಕೋಟೆಯು ಕಾಲಾಂತರದಲ್ಲಿ ಖಾಸಗಿ ವ್ಯಕ್ತಿಗಳ ಅತಿಕ್ರಮಣದಿಂದ ಕಣ್ಮರೆಯಾಗಿದೆ. ಕೋಟೆಯ ಹಳೆ ಗೋಡೆ, ಕಲ್ಲು, ಮಣ್ಣು ಈಗಲೂ ಕಾಣಸಿಗುತ್ತವೆ. ಹಾಗಾಗಿ, ರಾಣಿ ಚನ್ನಮ್ಮನ ಸಮಾಧಿ ಮತ್ತು ಬಾವಿಯನ್ನು ಯಾರಾದ್ರೂ ಅತಿಕ್ರಮಣ ಮಾಡುವ ಮುನ್ನ ಜೀರ್ಣೋದ್ಧಾರ ಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಇದನ್ನೂ ಓದಿ:ಅ.23ರಿಂದ 25ರವರೆಗೆ ಅದ್ಧೂರಿ ಕಿತ್ತೂರು ಉತ್ಸವ: ಶಾಸಕ ಬಾಬಾಸಾಹೇಬ