ಕರ್ನಾಟಕ

karnataka

ಬೆಳಗಾವಿ ಪ್ರವಾಸೋದ್ಯಮ ಇಲಾಖೆಗಿಲ್ಲ ಸ್ವಂತ ಸೂರು: ಪ್ರವಾಸಿ ಭವನ ನಿರ್ಮಾಣಕ್ಕೆ ಕೂಡಿ ಬಾರದ ಕಾಲ - Tourist House Problem

By ETV Bharat Karnataka Team

Published : Aug 26, 2024, 1:38 PM IST

ಬೆಳಗಾವಿಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಪ್ರವಾಸಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

TOURIST HOUSE PROBLEM
ಸುವರ್ಣಸೌಧದ ನೆಲಮಹಡಿಯಲ್ಲಿರುವ ಉಪನಿರ್ದೇಶಕರ ಕಚೇರಿ (ETV Bharat)

ಪ್ರವಾಸೋದ್ಯಮ ಇಲಾಖೆ ಜಂಟಿ‌ ನಿರ್ದೇಶಕಿ ಸೌಮ್ಯಾ ಬಾಪಟ್ (ETV Bharat)

ಬೆಳಗಾವಿ: ಗೋಕಾಕ್ ಜಲಪಾತ, ಗೊಡಚಿನಮಲ್ಕಿ ಜಲಪಾತ, ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಪ್ರವಾಸಿತಾಣಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸ್ವಂತ ಕಚೇರಿ ಇಲ್ಲದಿರುವುದು ವಿಪರ್ಯಾಸ. ಹಾಗಾಗಿ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಪಡೆಯಲು ಮತ್ತು ಅವುಗಳ ಅಭಿವೃದ್ಧಿ ಸಂಬಂಧ ಮನವಿ ಸಲ್ಲಿಸಲು ಜನ ಪದಾಡುವ ಸ್ಥಿತಿಯಿದೆ.

ಹೌದು, ಈ ಹಿಂದೆ ಬೆಳಗಾವಿ ನಗರದಲ್ಲೇ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರು, ಉಪನಿರ್ದೇಶಕರ‌ ಕಚೇರಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಬಾಡಿಗೆ ಕಟ್ಟಡದಲ್ಲಿ ಇದ್ದ ಕಾರಣ ಮೂರು ವರ್ಷಗಳ ಹಿಂದೆ ಸುವರ್ಣ ವಿಧಾನಸೌಧಕ್ಕೆ ಅವುಗಳನ್ನು ಸ್ಥಳಾಂತರಿಸಲಾಗಿದೆ. ನೆಲಮಹಡಿಯಲ್ಲಿ ಉಪನಿರ್ದೇಶಕರ ಕಚೇರಿ ಕೆಲಸ ಮಾಡುತ್ತಿದ್ದರೆ, ಸೌಧದ ಮೂರನೇ ಮಹಡಿಯಲ್ಲಿ ಜಂಟಿ ನಿರ್ದೇಶಕರ ಕೊಠಡಿ ಕಾರ್ಯನಿರ್ವಹಿಸುತ್ತಿದೆ.

ವಿವಿಧ ಕೆಲಸಗಳ ನಿಮಿತ್ತ ಪ್ರವಾಸೋದ್ಯಮ ಇಲಾಖೆಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಸಾರ್ವಜನಿಕರೂ ಬರುತ್ತಾರೆ. ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ನೆಲಮಹಡಿ ಹಾಗೂ ಮೂರನೇ ಮಹಡಿಯಲ್ಲಿ ಎರಡೂ ಕಡೆ ಇರುವ ಕಾರಣ ಅವರು ಪರದಾಡುವಂತಾಗಿದೆ. ಅಲ್ಲದೇ ಈ ಕಚೇರಿ ಇಕ್ಕಟ್ಟಾದ ಜಾಗದಲ್ಲಿರುವ ಕಾರಣ, ಕಡತಗಳ ನಿರ್ವಹಣೆಗೂ ತೊಂದರೆಯಾಗಿದೆ. ಇನ್ನು ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌಚಾಲಯಕ್ಕೆ ಸಾರ್ವಜನಿಕ ಶೌಚಾಲಯಗಳನ್ನೆ ನೆಚ್ಚಿಕೊಂಡಿದ್ದಾರೆ.

ಇನ್ನು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಸ್ವಂತ ಸೂರು ಇರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2018 – 19ರಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ಪ್ರವಾಸಿ ಭವನ ಮಂಜೂರು ಮಾಡಿತ್ತು. ಅಲ್ಲದೇ ಮಂಜೂರಾಗಿದ್ದ 2 ಕೋಟಿ ಅನುದಾನದ ಪೈಕಿ 1 ಕೋಟಿ ಸರ್ಕಾರ ಬಿಡುಗಡೆಯೂ ಮಾಡಿದೆ. ಆದರೆ, ಆರು ವರ್ಷಗಳಾದರೂ ಕಾಮಗಾರಿ ಮಾತ್ರ ಆರಂಭ ಆಗಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸುಸಜ್ಜಿತ ಪ್ರವಾಸಿ ಭವನದಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ಉಪ ನಿರ್ದೇಶಕರ ಕಚೇರಿ, ಇನ್‌ಫಾರ್ಮೇಷನ್‌ ಕಿಯಾಸ್ಕ್‌, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಬಲ್ಲ ಮ್ಯೂಸಿಯಂ, ಕಾನ್ಫರೆನ್ಸ್‌ ಹಾಲ್‌ ನಿರ್ಮಾಣ ಆಗಬೇಕಿತ್ತು. ಆದರೆ, ಜಾಗದ ಕೊರತೆಯಿಂದ ಕಾಮಗಾರಿ ಮುಂದಕ್ಕೆ ಹೋಗಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ‌ ನಿರ್ದೇಶಕಿ ಸೌಮ್ಯಾ ಬಾಪಟ್, ಬೆಳಗಾವಿಯಲ್ಲಿ ಪ್ರವಾಸಿ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಸಿಗದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ನಿವೇಶನ ಒದಗಿಸುವಂತೆ ಮಹಾನಗರ ಪಾಲಿಕೆ ಹಾಗೂ ಬುಡಾ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. ಒಂದಿಷ್ಟು ಜಾಗಗಳನ್ನು ಅವರು ತೋರಿಸಿದ್ದು, ಈ ಪೈಕಿ ಸೂಕ್ತ ಜಾಗವನ್ನು ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಿ, ಅನುಮತಿ ಪಡೆದು ಭವನ ನಿರ್ಮಾಣ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಸ ಪಾರ್ಕಿಂಗ್​ ನಿಯಮ, ಉಲ್ಲಂಘಿಸಿದರೆ ದಂಡಾಸ್ತ್ರ: ಹೊರ ಊರಿನವರ ಮನೆಗೆ ಬರುತ್ತೇ ನೋಟಿಸ್‌! - new parking rules

ABOUT THE AUTHOR

...view details