ಹುಬ್ಬಳ್ಳಿ (ಧಾರವಾಡ):ಒಂದು ನಾಗರಹಾವನ್ನು ಕೊಂದಿದ್ದಕ್ಕೆ ಇನ್ನೊಂದು ನಾಗರ ಹಾವು ತಮ್ಮ ಮೇಲೆ ಸೇಡು ಇಟ್ಟುಕೊಂಡು ಎಡೆಬಿಡದೇ ಬೆನ್ನು ಹತ್ತಿದೆ ಎಂದು ಗ್ರಾಮವೊಂದರ ಕುಟುಂಬದವರು ಒಂದೇ ದಿನದಲ್ಲಿ ನಾಗ ದೇವರ ಮಂದಿರ ನಿರ್ಮಿಸಿರುವ ಘಟನೆಯೊಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಘಟನೆ ಜರುಗಿದ್ದು, ಗ್ರಾಮದ ಹನುಮಂತ ಜಾಧವ್ ಎಂಬುವರ ಹಿತ್ತಲಿನಲ್ಲಿ ಹಾವಿನ ದ್ವೇಷದಿಂದ ಪಾರಾಗಲು ಒಂದೇ ದಿನ ರಾತ್ರಿಯಲ್ಲಿ ನಾಗರ ದೇವರ ದೇವಸ್ಥಾನ ನಿರ್ಮಿಸಿ ಪೂಜಿಸಲಾಗಿದೆ.
ಅಷ್ಟಕ್ಕೂ ನಡೆದಿದ್ದೇನು; ನಾಗರ ಪಂಚಮಿ ಮುನ್ನಾದಿನ ಹನುಮಂತ ಅವರ ಹಿತ್ತಲಿನಲ್ಲಿ ದೊಡ್ಡ ನಾಗರಹಾವೊಂದು ಕಾಣಿಸಿಕೊಂಡಿತ್ತು. ತುಂಬಾ ದಿನಗಳಿಂದ ಓಡಾಡಿಕೊಂಡಿದ್ದ ಈ ಹಾವು ಕಂಡ ತಕ್ಷಣವೇ ಭಯದಿಂದ ಅದನ್ನು ಹೊಡೆದು ಕೊಲ್ಲಲಾಗಿತ್ತು. ಅದಾದ ಒಂದು ವಾರದಲ್ಲಿ ಮನೆಯ 11 ವರ್ಷದ ಬಾಲಕಿಗೆ ಇದೇ ಹಿತ್ತಲಿನಲ್ಲಿ ಮತ್ತೊಂದು ನಾಗರಹಾವು ಪದೇ ಪದೆ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ ನೆರೆಹೊರೆಯವರಿಗೂ ಹಾವು ಕಾಣಿಸಿತ್ತು.
ಒಂದೇ ರಾತ್ರಿಯಲ್ಲಿ ನಾಗದೇವರ ಮಂದಿರ ನಿರ್ಮಾಣ (ETV Bharat) ಜೋಡಿ ಹಾವಿನ ಪೈಕಿ ಒಂದನ್ನು ಕೊಂದಿದ್ದರಿಂದ ಇನ್ನೊಂದು ಹಾವು ಸೇಡು ತೀರಿಸಿಕೊಳ್ಳಲು ನಮ್ಮ ಬೆನ್ನು ಬಿದ್ದಿದೆ ಎಂದು ಹೆದರಿದ ಹನುಮಂತ ಜಾಧವ್ ಕುಟುಂಬ ಹಾಗೂ ಗ್ರಾಮಸ್ಥರು ಅದಕ್ಕೆ ಪರಿಹಾರವಾಗಿ ಒಂದೇ ದಿನ ರಾತ್ರಿ ನಾಗರ ಹಾವಿಗೆ ದೇವಸ್ಥಾನ ಕಟ್ಟಿದರು. ಇದೀಗ ಆ ಗುಡಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ದೇವಸ್ಥಾನ ಕಟ್ಟಿದ ಮೇಲೂ ಕಾಣಿಸಿಕೊಂಡ ಹಾವು:ಈ ಕುರಿತು ಮಾತನಾಡಿದ ರಾಮಣ್ಣ ಜಾಧವ್, "ನಮ್ಮ ಮನೆ ಹಿತ್ತಲಿನಲ್ಲಿ ಸತ್ತ ಹಾವಿನ ದಹನ ಮಾಡಿದರೂ ಅದು ಸಂಪೂರ್ಣ ದಹನ ಆಗಲಿಲ್ಲ. ಆಗಲೇ ನಮಗೆ ಆತಂಕ ಶುರುವಾಗಿತ್ತು. ಅಲ್ಲದೇ ಮಕ್ಕಳಿಗೆ ಕಂಡ ಹಾವು ನಾಗದೇವತೆ ಎಂದೇ ನಂಬಿದ್ದೇವೆ. ಹಾವು ನೋಡಿದ ಮಕ್ಕಳೊಂದಿಗೆ ನಾವೆಲ್ಲರೂ ಪ್ರಾಯಶ್ಚಿತಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಪೂಜೆ ಸಹ ಸಲ್ಲಿಸಿ ಬಂದಿದ್ದೇವೆ. ಅಲ್ಲಿಯೂ ದೋಷ ಪರಿಹಾರಕ್ಕೆ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣದ ಸೂತ್ರವನ್ನು ಅರ್ಚಕರು ನೀಡಿದರು. ಅಲ್ಲಿಂದ ಬಂದ ದಿನ ರಾತ್ರಿಯೇ ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನ ಕಟ್ಟಿ, ಜೋಡಿ ನಾಗರ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ಸಲ್ಲಿಸುತ್ತಿದ್ದೇವೆ. ದೇವಸ್ಥಾನ ಕಟ್ಟಿದ ಮೇಲೂ ಎರಡು ಬಾರಿ ಹಾವು ಕಂಡಿದೆ" ಎಂದು ತಿಳಿಸಿದರು.
ಜಾಧವ್ ಅವರ ಮನೆಯ ಹಿತ್ತಲಿನಲ್ಲಿ ಈಗಷ್ಟೇ ನಿರ್ಮಾಣವಾಗಿರುವ ಪುಟ್ಟ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಆಗಿರುವ ಕಲ್ಲಿನ ನಾಗ ದೇವರ ದರ್ಶನಕ್ಕೆ ಗ್ರಾಮದ ಜನರು ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಸ್ಥಳೀಯರು ಈಗ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ಕಳಸ ಸಹಿತ ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ಆರು ಅಡಿ ಉದ್ದದ ಎರಡು ನಾಗರಹಾವು ರಕ್ಷಿಸಿದ ಸ್ನೇಕ್ ಬಸವರಾಜ್ : ವಿಡಿಯೋ