ಬೆಂಗಳೂರು: "ಇವತ್ತು ಅವಳ ಹುಟ್ಟುಹಬ್ಬವಿತ್ತು. ಇದಕ್ಕಾಗಿ ಹೊಸ ಬಟ್ಟೆ ಖರೀದಿಸಿದ್ದೆ. ಕೇಕ್ ಕಟ್ ಮಾಡಿ ಸಂಭ್ರಮಿಸಲು ತಯಾರಿ ನಡೆಸಿದ್ದೆ. ಏಕಾಏಕಿ ಮಗಳು ಅಗ್ನಿ ದುರಂತದಲ್ಲಿ ಸಾವನ್ನಪ್ಪುತ್ತಾಳೆಂದು ನಿರೀಕ್ಷೆ ಮಾಡಿರಲಿಲ್ಲ ಸರ್".. ಇದು ರಾಜಾಜಿನಗರದ ಎಲೆಕ್ಟ್ರಿಕಲ್ ಬೈಕ್ ಶೋ ರೂಂನಲ್ಲಿ ನಿನ್ನೆ ನಡೆದಿದ್ದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಯುವತಿ ತಂದೆ ಆರ್ಮುಗಂ ನುಡಿದ ನೋವಿನ ನುಡಿಗಳಿವು.
ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಬೇಕಾದ ಮನೆಯಲ್ಲೀಗ ಸೂತಕ ಆವರಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು 27ನೇ ವರ್ಷಕ್ಕೆ ಮಗಳು ಪ್ರಿಯಾ ಕಾಲಿಡುತ್ತಿದ್ದಳು. ಯಾರದ್ದೋ ನಿರ್ಲಕ್ಷ್ಯಕ್ಕೆ ಬದುಕಿ ಬಾಳಬೇಕಾದ ಯುವತಿ ಇನ್ನಿಲ್ಲವಾಗಿದ್ದಾಳೆ. ಓಕಳಿಪುರಂನಲ್ಲಿರುವ ಯುವತಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳನ್ನು ಕಳೆದುಕೊಂಡೆವು ಎಂಬ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಎಲ್ಲಾ ತಯಾರಿ ಮಾಡಿಕೊಂಡಿದ್ದ ಕುಟುಂಬ:ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಳ ತಂದೆ ಆರ್ಮುಗಂ "ಇಂದು ಮಗಳ ಹುಟ್ಟುಹಬ್ಬವಿತ್ತು. ಹುಟ್ಟು ಹಬ್ಬವಿದ್ದಿದ್ದರಿಂದ ಬಟ್ಟೆ ತಂದಿಟ್ಟಿದ್ದೆ. ಕೇಕ್ ತರೋದಕ್ಕೆ ಎಲ್ಲಾ ರೆಡಿ ಮಾಡಿಕೊಂಡಿದ್ದೆವು. ಆದರೆ ಮಗಳು ದುರಂತದಲ್ಲಿ ಸಾವನ್ನಪ್ಪುತ್ತಾಳೆ ಅಂತಾ ನಿರೀಕ್ಷಿಸಿದ್ದಿರಲಿಲ್ಲ. ನನ್ನ ಮಗಳು ನಮ್ಮ ಮನೆ ಮಹಾಲಕ್ಷ್ಮಿ, ನಮಗೆ ಅವಳೇ ದೇವರು ಸಾರ್. ಏನೇನೋ ಕನಸು ಕಂಡಿದ್ದಳು. ಸಿಎ ಓದುವ ಕನಸು ಕಟ್ಟಿಕೊಂಡಿದ್ದಳು, ಮನೆ ಜವಾಬ್ದಾರಿ ಹೊತ್ತಿದ್ದಳು" ಎಂದು ಕಣ್ಣೀರು ಹಾಕಿದರು.