ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ ಬಹುನಿರೀಕ್ಷಿತ ''ಭೈರತಿ ರಣಗಲ್'' ಚಿತ್ರ ನವೆಂಬರ್ 15ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಾಯಕರಾಗಿ ನಟಿಸಿದ್ದು, ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಸ್ವೀಕರಿಸಿದ್ದಾರೆ. "ಮಫ್ತಿ" ಚಿತ್ರದ ಪ್ರೀಕ್ವೆಲ್ ಆಗಿರುವ ಈ ಸಿನಿಮಾ ಕನ್ನಡ ಕಲಾಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಜನರು ಕುಟುಂಬ ಸಮೇತ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಕನ್ನಡ ಸಿನಿಮಾ ನೋಡಲು ಜನರು ಬರುತ್ತಿಲ್ಲ ಎಂಬ ಮಾತನ್ನು "ಭೈರತಿ ರಣಗಲ್" ಸುಳ್ಳು ಮಾಡಿದೆ. ಕರುನಾಡ ಚಕ್ರವರ್ತಿಯ ಅಮೋಘ ಅಭಿನಯಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಯಶಸ್ಸಿನ ಖುಷಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿ ತಮ್ಮ ಖುಷಿ ಹಂಚಿಕೊಂಡರು.
ಬರಲಿದೆ ಮಫ್ತಿ 2: "ಮಫ್ತಿ" ಚಿತ್ರದಲ್ಲಿ ನನ್ನ "ಭೈರತಿ ರಣಗಲ್" ಪಾತ್ರವನ್ನು ನೀವು ಇಷ್ಟಪಟ್ಟಿದ್ದೀರಿ. ಆದರೆ "ಭೈರತಿ ರಣಗಲ್" ಚಿತ್ರದ ರಣಗಲ್ ಪಾತ್ರವನ್ನು ನೀವು ಹೃದಯಕ್ಕೆ ತೆಗೆದುಕೊಂಡಿದ್ದೀರಿ. ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿ ಮಾತನಾಡಿದ ನಾಯಕನಟ ಶಿವರಾಜಕುಮಾರ್, ನಮ್ಮ ಸಂಸ್ಥೆಯಿಂದ ನಿರ್ಮಾಣಗೊಂಡ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದ್ದು. ಮುಂದೆ "ಮಫ್ತಿ 2" ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತ ಮಾಡುತ್ತೇನೆ. ಆದರೆ, ಶೀರ್ಷಿಕೆ "ಮಫ್ತಿ 2" ಅಂತಾ ಇರುವುದಿಲ್ಲ. ಶೀಘ್ರದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ನಿಮ್ಮ ಮುಂದಿಡುತ್ತೇನೆ ಎಂದರು.
ಗೀತಾ ಪಿಕ್ಚರ್ಸ್ನಿಂದ ಉತ್ತಮ ಚಿತ್ರಗಳು: ಅಪ್ಪಾಜಿ ಅವರು ಹೇಳಿದ ಹಾಗೆ ಈ ಯಶಸ್ಸಿಗೆ ಮುಖ್ಯ ಕಾರಣ ಅಭಿಮಾನಿ ದೇವರುಗಳು. ಅವರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ನರ್ತನ್ ಅವರು ಬಂದು ಈ ಚಿತ್ರದ ಕಥೆ ಹೇಳಿದಾಗ, ನಾನು ಅವರು "ಮಫ್ತಿ"ಯ ಸೀಕ್ವೆಲ್ ಹೇಳಬಹುದು ಅಂದುಕೊಂಡೆ. ಆದರೆ ಅವರು ಪ್ರೀಕ್ವೆಲ್ ಹೇಳಿದರು. ಈ ಚಿತ್ರದ ಯಶಸ್ಸಿನ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ಧನ್ಯವಾದಗಳು. ನಮ್ಮ ಸಂಸ್ಥೆಯಿಂದ ಮುಂದೆ ಕೂಡಾ ಉತ್ತಮ ಚಿತ್ರಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.
ಈ ಸಿನಿಮಾಗೆ ಮುಖ್ಯ ಕಾರಣ ಶಿವಣ್ಣನ ಅಭಿಮಾನಿಗಳು: "ಮಫ್ತಿ" ಚಿತ್ರದ ಯಶಸ್ಸಿನ ನಂತರ "ರಣಗಲ್" ಚಿತ್ರ ಮಾಡಿ ಎಂದು ಫ್ಯಾನ್ಸ್ ಹೇಳಿದ್ದರು. ಈ ಚಿತ್ರ ಆಗಲು ಅವರೇ ಮುಖ್ಯ ಕಾರಣ ಎನ್ನಬಹುದು. ಆನಂತರ, ನನ್ನನ್ನು ಕರೆದು ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು "ಭೈರತಿ ರಣಗಲ್" ಮಾಡಲು ಅಡ್ವಾನ್ಸ್ ನೀಡಿದ್ದು, ಗೀತಾ ಶಿವರಾಜ್ಕುಮಾರ್ ಅವರು. ಅವರಿಗೆ ಹಾಗೂ ರಣಗಲ್ ಪಾತ್ರಕ್ಕೆ ಜೀವ ತುಂಬಿದ ಶಿವರಾಜ್ಕುಮಾರ್ ಅವರಿಗೆ ಮತ್ತು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದರು ನಿರ್ದೇಶಕ ನರ್ತನ್.
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಬಾಲಿವುಡ್ ಖ್ಯಾತ ಸೆಲೆಬ್ರಿಟಿಗಳಿಂದ ಮತದಾನ - ಯಾರೆಲ್ಲ ಮತ ಚಲಾಯಿಸಿದರು ವಿಡಿಯೋ ನೋಡಿ!
ಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಸಿನಿಮಾಗಳು ಬಂದರೆ ಖಂಡಿತವಾಗಿಯೂ ಜನರು ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಬಿಡುಗಡೆಯಾದ ದಿನದಿಂದ ಎಲ್ಲಾ ಚಿತ್ರಮಂದಿರಗಳಲ್ಲೂ "ಭೈರತಿ ರಣಗಲ್" ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮೊಗದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆ ಎಂದರು ವಿತರಕ ಜಗದೀಶ್.
ಇದನ್ನೂ ಓದಿ: 5 ದಿನದಲ್ಲಿ 10 ಕೋಟಿಗೂ ಅಧಿಕ ಗಳಿಕೆ: ಶಿವಣ್ಣನ 'ಭೈರತಿ ರಣಗಲ್' ಕಲೆಕ್ಷನ್ ಮಾಹಿತಿ
ಚಿತ್ರದಲ್ಲಿ ನಟಿಸಿರುವ ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಸೇರಿ ಮೊದಲಾದ ಕಲಾವಿದರು, ಛಾಯಾಗ್ರಾಹಕ ನವೀನ್ ಕುಮಾರ್, ಸಂಕಲನಕಾರ ಅಕ್ಷಯ್ ಸೇರಿ ತಂತ್ರಜ್ಞರು ತಮ್ಮ ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು. ವೀರೇಶ್ ಚಿತ್ರಮಂದಿರದ ಕುಶಾಲ್, ನರ್ತಕಿ ಚಿತ್ರಮಂದಿರದ ವೆಂಕಟೇಶ್ ಹಾಗೂ ಮೈಸೂರಿನ ಗಾಯತ್ರಿ ಚಿತ್ರಮಂದಿರದ ಜಯರಾಂ ಅವರು "ಭೈರತಿ ರಣಗಲ್" ಚಿತ್ರದಿಂದಾಗಿ ಚಿತ್ರಮಂದಿರಕ್ಕೆ ಹರಿದು ಬರುತ್ತಿರುವ ಜನಸಾಗರ ಕಂಡು ಸಂತೋಷವಾಗಿದೆ ಎಂದು ಹರ್ಷ ಹಂಚಿಕೊಂಡರು. ನಿರ್ಮಾಪಕರಾದ ರಾಜ್ಕುಮಾರ್, ಕೆ.ಪಿ.ಶ್ರೀಕಾಂತ್, ಸುಧೀಂದ್ರ, ಕೃಷ್ಣ ಸಾರ್ಥಕ್, ನಾಗೇಂದ್ರ, ಪುನೀತ್ ಸೇರಿ ಹಲವರು ಸಕ್ಸಸ್ ಮೀಟ್ನಲ್ಲಿ ಉಪಸ್ಥಿತರಿದ್ದರು.