ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಗೆ ಸಂಬಂಧಿಸಿದಂತೆ ಈ ಹಿಂದೆ ದೇಶದ ಜನರಿಂದ ಸಾಕಷ್ಟು ವಿರೋಧ ಎದುರಿಸಿದ್ದ ಕೇಂದ್ರ ಸರ್ಕಾರವು, ತನ್ನ ಗೃಹ ಸಚಿವ ಅಮಿತ್ ಶಾ ಅವರ ಮೂಲಕ ಅಂತಹ ಯಾವುದೇ ಪ್ರಸ್ತಾಪವು ಸರ್ಕಾರದ ಮುಂದೆ ಇಲ್ಲವೆಂದು ಹೇಳಿತ್ತು. ಆದರೆ, ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮತ್ತೊಮ್ಮೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಗೊಂದಲ ಎಬ್ಬಿಸಿ ಅವರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈಗಾಗಲೇ ಹಲವು ಬಾರಿ ಹೇಳಲಾದಂತೆ ಪ್ರಜಾಪ್ರಭುತ್ವ ದೇಶವಾದ ಭಾರತವು ಸಾಮರಸ್ಯದ ತತ್ವವನ್ನು ಅಳವಡಿಸಿಕೊಂಡ ನೆಲವಾಗಿದೆ. ಬುದ್ಧನ ಕಾಲದಲ್ಲೇ ಈ ದೇಶವು ಪೌರತ್ವ ಮತ್ತು ಪ್ರಜಾಪ್ರಭುತ್ವವನ್ನು ಅನುಭವಿಸಿದ್ದು, ನಮಗೆ ಪೌರತ್ವ ಕೊಡಿ ಎಂದು ಕೇಳುವಂತಹ ದುರ್ಗತಿ ಬರುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಮೂಲತಃ ಶೋಷಿತ ವರ್ಗಗಳ ವಿರೋಧಿಗಳಾಗಿರುವ ಮನುವಾದಿ ಬಿಜೆಪಿಗರು ಕ್ರಮೇಣ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಪಡಿಸಿ ಅವರಲ್ಲಿ ಭೀತಿ ಹುಟ್ಟಿಸಿ ನಂತರ ಅದನ್ನು ದಲಿತರು, ಆದಿವಾಸಿಗಳು ಮತ್ತು ಹಿಂದುಗಳಿದ ವರ್ಗಗಳ ಮೇಲೂ ಆ ಭೀತಿಯನ್ನು ಹೇರುತ್ತಾರೆ ಎಂದು ಮಹದೇವಪ್ಪ ಕೇಂದ್ರದ ವಿರುದ್ಧ ಕಿಡಿ ಕಾರಿದರು.