ಬೆಂಗಳೂರು: ಸಂಘ ಪರಿವಾರದ ನಿಷ್ಠೆ ಹೊಂದಿದ ಕುಟುಂಬದಿಂದ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚುನಾವಣಾ ರಾಜಕೀಯದ ಸಂಧ್ಯಾಕಾಲದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ನಿರ್ಧಾರವನ್ನು ತಪ್ಪು ಎಂದು ಒಪ್ಪಿಕೊಂಡು ರಾಜಕೀಯವಾಗಿ ಬೆಳೆದು ಬಂದ ತತ್ವ ಸಿದ್ದಾಂತಕ್ಕೆ ಕಟ್ಟುಬಿದ್ದು ಮರಳಿ ಮಾತೃಪಕ್ಷ ಸೇರಿದ್ದಾರೆ.
ಸೋಲಿಲ್ಲದ ಸರದಾರನಾಗಿ ರಾಜಕಾರಣ ಮಾಡಿದ್ದ ಶೆಟ್ಟರ್ ಕಳೆದ ಚುನಾವಣೆಯಲ್ಲಿ ಮೊದಲ ಸೋಲಿನ ರುಚಿ ನೋಡಿದ ಕಹಿ ಅನುಭವದೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ್ದಾರೆ. ಲಿಂಗಾಯತ ಬಣಜಿಗ ಉಪಪಂಗಡಕ್ಕೆ ಸೇರಿದ ಶೆಟ್ಟರ್ ಇಡೀ ಕುಟುಂಬವೇ ಸಂಘ ನಿಷ್ಠವಾಗಿದೆ. ಶೆಟ್ಟರ್ ತಂದೆ ಹುಬ್ಬಳ್ಳಿ - ಧಾರವಾಡದ ಮೊದಲ ಜನಸಂಘದ ಮೇಯರ್ ಎಂಬ ಹೆಗ್ಗಳಿಕೆ ಪಡೆದರೆ, ಶೆಟ್ಟರ್ ಚಿಕ್ಕಪ್ಪ ಸದಾಶಿವ ಶೆಟ್ಟರ್ 1967ರಲ್ಲಿ ಹುಬ್ಬಳ್ಳಿ ನಗರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ದಕ್ಷಿಣ ಭಾರತದಲ್ಲಿ ವಿಧಾನಸಭೆಗೆ ಆಯ್ಕೆಯಾದ ಮೊದಲ ಜನಸಂಘದ ನಾಯಕ ಎಂಬ ಹಿರಿಮೆ ಪಡೆದಿದ್ದರು.
ಇಂತಹ ಹಿನ್ನೆಲೆಯಲ್ಲಿ ಬೆಳೆದು ಬಂದ ಜಗದೀಶ್ ಶೆಟ್ಟರ್ ಸಹಜವಾಗಿಯೇ ಸಂಘ ನಿಷ್ಠೆ ಮುಂದುವರೆಸಿಕೊಂಡೇ ರಾಜಕೀಯವಾಗಿ ಬೆಳೆದು ಬಂದರು. ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿಯೊಂದಿಗೆ ಗುರುತಿಸಿಕೊಂಡ ಶೆಟ್ಟರ್ ಬಿಕಾಂ ಪದವಿ ಮುಗಿಸಿ ಎಲ್‌ಎಲ್‌ಬಿ ಮಾಡಿದರು. ನಂತರ ವಕೀಲಿಕೆ ವೃತ್ತಿ ಆರಂಭಿಸಿದರು. ಶೆಟ್ಟರ್ - ಶಿಲ್ಪಾ ದಂಪತಿಗೆ ಪ್ರಶಾಂತ್ ಮತ್ತು ಸಂಕಲ್ಪ್ ಎಂಬ ಮಕ್ಕಳಿದ್ದಾರೆ.
ಶೆಟ್ಟರ್ ರಾಜಕೀಯ ಪ್ರವೇಶ:1994ರಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಸಫಲರಾದ ಶೆಟ್ಟರ್ ಮೊದಲ ಪ್ರಯತ್ನದಲ್ಲೇ ಗೆಲುವಿನ ರುಚಿ ನೋಡಿದರು. ಮತ್ತೆ ತಿರುಗಿ ನೋಡಲೇ ಇಲ್ಲ. 1999, 2004, 2008, 2013, 2018 ಹೀಗೆ ಸತತವಾಗಿ ಗೆಲ್ಲುತ್ತಲೇ ಬಂದಿದ್ದರು. ವಿಶೇಷ ಎಂದರೆ 1999ರಲ್ಲಿ ಯಡಿಯೂರಪ್ಪ, ಈಶ್ವರಪ್ಪ ಸೇರಿ ಘಟಾನುಘಟಿ ನಾಯಕರು ಸೋತರೂ ಶೆಟ್ಟರ್ ಗೆದ್ದಿದ್ದರು. 2023ರ ವಿಧಾನಸಭಾ ಚುನಾವಣಾ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಚಿತವಾದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಕಡೆ ನಡೆದಿದ್ದರು.
ಶೆಟ್ಟರ್ ಪ್ರತಿಪಕ್ಷ ನಾಯಕ, ವಿಧಾನ ಸಭಾಧ್ಯಕ್ಷ, ಸಚಿವ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಸರ್ಕಾರದಲ್ಲಿ ಜವಾಬ್ದಾರಿ ನಿರ್ವಹಿಸಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1990 ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ, 1994 ರಲ್ಲಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ, 1999ರಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ನಂತರ 2005ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಬಿಎಸ್ವೈ ಸೋಲು - ಶೆಟ್ಟರ್ಗೆ ಪಟ್ಟ:1999ರಲ್ಲಿ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿತು. ಆದರೆ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಚುನಾವಣೆಯಲ್ಲಿ ಸೋತಿದ್ದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಜಗದೀಶ್ ಶೆಟ್ಟರ್ ಅವರನ್ನು ಹುಡುಕಿಕೊಂಡು ಬಂದಿತ್ತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರತಿ ಪಕ್ಷದ ನಾಯಕರಾಗಿ ಮೊದಲ ಬಾರಿ ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರು.
2004ರಲ್ಲಿ ಮತ್ತೆ ಬಿಜೆಪಿ ಪ್ರತಿಪಕ್ಷದ ಸಾಲಿನಲ್ಲೇ ಕುಳಿತರೂ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾದರು. ಆದರೆ, ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಅಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿತ್ತು. 2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಶೆಟ್ಟರ್ ಸಚಿವರಾಗಿದ್ದರು.
ಸ್ಪೀಕರ್ನಿಂದ ಸಿಎಂ ಹುದ್ದೆ:ಅಧಿಕಾರ ಹಸ್ತಾಂತರವಾಗದೇ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬಳಿಕ 2008ರಲ್ಲಿ ಚುನಾವಣೆ ನಡೆದಿತ್ತು. ಆಗ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆದರೆ, ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಸ್ಪೀಕರ್ ಸ್ಥಾನ ನೀಡಲಾಗಿತ್ತು. ಇದರಿಂದಾಗಿ ಮೊದಲ ಬಾರಿ ಜಗದೀಶ್ ಶೆಟ್ಟರ್ ವಿಧಾನಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ ಪಕ್ಷದಲ್ಲಿನ ಆಂತರಿಕ ವಿದ್ಯಮಾನಗಳ ಕಾರಣ ಸಂಪುಟ ಪುನಾರಚನೆ ಮಾಡಲಾಗಿತ್ತು.
ಆಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೆಟ್ಟರ್ 2009ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಡಿ.ವಿ.ಸದಾನಂದಗೌಡ ಅವರಿಗೆ ಸಿಎಂ ಸ್ಥಾನ ಒಲಿದಿತ್ತು. ಆದರೆ, 11 ತಿಂಗಳಿಗೆ ಅವರು ರಾಜೀನಾಮೆ ನೀಡಬೇಕಾದ ಸ್ಥಿತಿ ಬಂದಿತ್ತು. ಆಗ ಯಡಿಯೂರಪ್ಪ ಅವರೇ ಶೆಟ್ಟರ್ ಪರ ನಿಂತ ಕಾರಣ ಮುಖ್ಯಮಂತ್ರಿ ಪದವಿ ಲಭಿಸಿತ್ತು. ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಶೆಟ್ಟರ್ 10 ತಿಂಗಳು ರಾಜ್ಯಭಾರ ಮಾಡಿದ್ದರು.
ಎರಡನೇ ಬಾರಿ ಪ್ರತಿಪಕ್ಷ ನಾಯಕ:2013ರಲ್ಲಿ ಬಿಜೆಪಿ ಆಡಳಿತ ಪಕ್ಷದ ಸಾಲಿನಿಂದ ಪ್ರತಿಪಕ್ಷದ ಸಾಲಿಗೆ ಜಾರಿತ್ತು. ಈ ಅವಧಿಯಲ್ಲಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಾಗಿದ್ದರು. ಮತ್ತೊಂದೆಡೆ, ಬಿಜೆಪಿ ತೊರೆದಿದ್ದ ಯಡಿಯೂರಪ್ಪ ಕೆಜೆಪಿಯನ್ನ ಬಿಜೆಪಿ ಜೊತೆ ವಿಲೀನ ಮಾಡಿದ್ದರು. ಇದರಿಂದ ಬಿಜೆಪಿಗೆ ಅಧಿಕೃತ ಪ್ರತಿಪಕ್ಷ ಮಾನ್ಯತೆ ಸಿಕ್ಕು, ಶೆಟ್ಟರ್ ಪ್ರತಿಪಕ್ಷ ನಾಯಕರಾದರು.
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 2019ರಲ್ಲಿ ಈ ಸರ್ಕಾರ ಪತನಗೊಂಡ ಬಿಜೆಪಿ ಸರ್ಕಾರ ರಚನೆಯಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಮಾಜಿ ಸಿಎಂ ಆಗಿದ್ದರೂ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸಚಿವರಾಗಿ ಸಂಪುಟಕ್ಕೆ ಸೇರಿದ್ದರು. 2021ರ ಜುಲೈನಲ್ಲಿ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿದು ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡರು. ಆಗ ಬೊಮ್ಮಾಯಿ ಸಂಪುಟ ಸೇರಲು ಶೆಟ್ಟರ್ ನಿರಾಕರಿಸಿ ಸರ್ಕಾರದಿಂದ ಹೊರಗುಳಿದಿದ್ದರು.
ಶೆಟ್ಟರ್ಗೆ ಮೊದಲ ಸೋಲು:2023ರಲ್ಲಿ ವಿಧಾನಸಭೆ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಶೆಟ್ಟರ್ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಪಕ್ಷದ ವರಿಷ್ಠರು ನೀಡಿದ್ದ ರಾಜಕೀಯ ಪರ್ಯಾಯ ಅವಕಾಶದ ಭರವಸೆ ತಿರಸ್ಕರಿಸಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಸ್ಪರ್ಧೆಯನ್ನೂ ಮಾಡಿದ್ದರು. ಆದರೆ, ಮೊದಲ ಬಾರಿ ಸೋಲಿನ ರುಚಿ ನೋಡ ಬೇಕಾಯಿತು. ಆರು ಬಾರಿ ಗೆದ್ದಿದ್ದ ಕ್ಷೇತ್ರದಲ್ಲೇ ತಮ್ಮ ಶಿಷ್ಯನ ವಿರುದ್ಧ ಸೋತು ಮೊದಲ ಸೋಲಿನ ಕಹಿಯನ್ನು ಶೆಟ್ಟರ್ ಅನುಭವಿಸಿದರು.
ಚುನಾವಣೆಯಲ್ಲಿ ಸೋತರೂ ಶೆಟ್ಟರ್ ಅವರಿಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿತ್ತು. ಜವಾಬ್ದಾರಿ ಹುದ್ದೆ ನೀಡಲಿಲ್ಲ. ಬಿಜೆಪಿಯಲ್ಲಿ ಕೋರ್ ಕಮಿಟಿ ಸದಸ್ಯರಾಗಿ ಸದಾ ಮುಂದಿನ ಸಾಲಿನಲ್ಲಿ ಇರುತ್ತಿದ್ದ ಶೆಟ್ಟರ್ ಕಾಂಗ್ರೆಸ್ನಲ್ಲಿ ನೇಪಥ್ಯಕ್ಕೆ ಸರಿಯುವಂತಾಯಿತು. ಅಲ್ಲದೇ, ತಮ್ಮ ಸಿದ್ದಾಂತಗಳೊಂದಿಗೆ ರಾಜೀಮಾಡಿಕೊಳ್ಳುವ ಸ್ಥಿತಿ ಎದುರಾಯಿತು. ಬೆಳೆದು ಬಂದ ಪಕ್ಷ ಮತ್ತು ಸಿದ್ದಾಂತವನ್ನು ಟೀಕಿಸಿ ಕಾಂಗ್ರೆಸ್ ಸಮರ್ಥಿಸಿಕೊಳ್ಳುವ ಸ್ಥಿತಿ ಎದುರಿಸಲಾಗದೇ ಕಡೆಗೂ ಕಾಂಗ್ರೆಸ್ಗೆ ವಿದಾಯ ಹೇಳಿ ಬಿಜೆಪಿಗೆ ಮರಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ನಂತರ ಪ್ರಭಾವಿ ನಾಯಕ ಶೆಟ್ಟರ್ ಆಗಿದ್ದು, ಮರಳಿ ಪಕ್ಷಕ್ಕೆ ಬಂದಿದ್ದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಬಲ ಬರಲಿದೆ ಎನ್ನುವ ನಿರೀಕ್ಷೆ ಬಿಜೆಪಿ ನಾಯಕರದ್ದಾಗಿದೆ. ಹಾಗಾಗಿಯೇ ಖುದ್ದು ಯಡಿಯೂರಪ್ಪ ಮತ್ತು ಅವರ ಪುತ್ರ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಆಸಕ್ತಿ ವಹಿಸಿ ಶೆಟ್ಟರ್ ಅವರನ್ನು ಹೈಕಮಾಂಡ್ ನಾಯಕರ ಭೇಟಿ ಮಾಡಿಸಿ ದೆಹಲಿಯಲ್ಲೇ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ಗೆ ಗುಡ್ಬೈ: ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್