ಮಂಗಳೂರು: ನಗರದ ನರ್ಸಿಂಗ್ ಹೋಮ್ನಲ್ಲಿ ಗರ್ಭಿಣಿಯೊಬ್ಬರ ಹೆರಿಗೆಗೆ ನಿಗದಿಗಿಂತ ಅಧಿಕ ದರ ವಸೂಲಿ ಮಾಡಿರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ.
ಗರ್ಭಿಣಿಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರಿಗೆ ಸಹಜ ಹೆರಿಗೆಯಲ್ಲಿ ಅವಳಿ ಮಕ್ಕಳು ಜನಿಸಿದ್ದವು. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯುಗೆ ದಾಖಲಿಸುವಂತೆ ಹೆರಿಗೆ ವೈದ್ಯರಾದ ನಳಿನಿ ಪೈ ಹಾಗೂ ಮಕ್ಕಳ ವೈದ್ಯ ಮಾರಿಯೋ ಜೆ. ಬುಕೆಲೋ ಸಲಹೆ ನೀಡಿದ್ದರು. ಅದರಂತೆ ಮೇ 29ರಿಂದ ಜೂ.15ರವರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು.
ಈ ಚಿಕಿತ್ಸೆಗೆ 2019, ಜೂ.15ರಂದು ಮಹಿಳೆ 5,34,791 ರೂ. ಪಾವತಿ ಮಾಡಿದ್ದರು. ಹಾಗೆಯೇ 1.80 ಲಕ್ಷ ರೂ. ವೈದ್ಯ ಮಾರಿಯೊ ಜೆ. ಬುಕೆಲೊ, 25 ಸಾವಿರ ರೂ. ನಳಿನಿ ಪೈಗೆ ಸಂದಾಯ ಮಾಡಲಾಗಿತ್ತು. ಈ ಬಗ್ಗೆ ಮಹಿಳೆಯ ಪತಿ ನ್ಯಾಯವಾದಿ ರೋಶನ್ ರಾಜ್, ಆಸ್ಪತ್ರೆಯಲ್ಲಿ ಅಧಿಕ ವೆಚ್ಚ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು.