ಮಂಗಳೂರು: ಕರಾವಳಿಯ ಜಾನಪದ ಸೊಗಡು ಕಂಬಳ ಕ್ರೀಡೆ ಇದೀಗ ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ಕರಾವಳಿ ಜನರಿಗೆ ಮಾತ್ರ ಸೀಮಿತವಾಗಿದ್ದ ಕಂಬಳ ನಿಷೇಧದ ತೂಗುಗತ್ತಿಯಿಂದ ಪಾರಾದ ಬಳಿಕ ಇದು ಮತ್ತಷ್ಟು ಜನಪ್ರಿಯವಾಗಿದೆ. ಕಾಂತಾರ ಸಿನಿಮಾ ಬಂದ ಬಳಿಕವಂತೂ ಕಂಬಳ ಬಹಳಷ್ಟು ಜನಪ್ರಿಯವಾಗಿದೆ. ಈ ಕಂಬಳದಲ್ಲಿ ಮುಖ್ಯ ಹೀರೋ ಕೋಣ. ಇವುಗಳ ಆರೈಕೆ ಬಗ್ಗೆ ವಿಶೇಷ ಮಾಹಿತಿ ತಿಳಿಯೋಣ.
ಕಂಬಳದ ಬಗ್ಗೆ ಮಾಹಿತಿ:ಕಂಬಳದ ಸಾಕಷ್ಟು ಶ್ರಮಪಟ್ಟು ಬೆಳೆಸಿದ ಕೋಣಗಳನ್ನು ಹದ ಮಾಡಿದ ಮಣ್ಣು ಮತ್ತು ನೀರಿನಿಂದ ತುಂಬಿರುವ ಕರೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಕಂಬಳ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆಯಾಗಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯವಾಗಿರುತ್ತದೆ. ಸ್ಪರ್ಧೆಗೆ 125 ಮೀಟರ್ನಷ್ಟು ಉದ್ದದ ಕರೆಯನ್ನು ಸಜ್ಜುಗೊಳಿಸಿರಲಾಗುತ್ತದೆ.
2020ರಲ್ಲಿ ನಡೆದ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್ನಲ್ಲಿ ಕ್ರಮಿಸುವ ಮೂಲಕ 2009ರಲ್ಲಿ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಅವರ 9.58 ಸೆಕೆಂಡ್ನಲ್ಲಿ 100 ಮೀಟರ್ ಕ್ರಮಿಸಿದ ದಾಖಲೆಯನ್ನು ಮೀರಿಸಿದ್ದರು. 2021ರಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ 100 ಮೀಟರ್ ದೂರವನ್ನು ಶ್ರೀನಿವಾಸ ಗೌಡ, ಪಾಣಿಲ ಬಾಡ ಪೂಜಾರಿಯವರ ಕೋಣಗಳಿಂದ ಕೇವಲ 8.96 ಸೆಕೆಂಡ್ಗಳಲ್ಲಿ ಪೂರೈಸಿ ಮತ್ತೊಂದು ಹೊಸ ದಾಖಲೆ ಬರೆದಿದ್ದರು.
ಕಂಬಳ ಸೀಸನ್ ಆರಂಭವಾದ ಬಳಿಕ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ ಕಂಬಳ ಕ್ರೀಡೆ ಆಯೋಜಿಸಲಾಗುತ್ತದೆ. ಕರಾವಳಿ ಜಿಲ್ಲೆಯ ಎಲ್ಲಿಯೇ ಕಂಬಳ ನಡೆದರೂ ಸುಮಾರು 150 ಕೋಣಗಳು ಸ್ಪರ್ಧೆಗೆ ಬರುತ್ತವೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿಯೂ 150ಕ್ಕೂ ಅಧಿಕ ಜೋಡಿ ಕಂಬಳ ಕೋಣಗಳು ಭಾಗಿಯಾಗಿದ್ದವು. ಈ ಬಾರಿ ಶಿವಮೊಗ್ಗದಲ್ಲಿಯೂ ಕಂಬಳ ನಡೆಸಲು ತಯಾರಿಯಾಗಿದ್ದು, ಒಂದು ವೇಳೆ ಅಲ್ಲಿ ಕಂಬಳ ನಡೆದರೆ, ಅಲ್ಲಿಯೂ ಅಷ್ಟೇ ಸಂಖ್ಯೆಯಲ್ಲಿ ಕಂಬಳಕ್ಕೆ ಕೋಣಗಳ ಜೋಡಿಗಳು ಭಾಗಿಯಾಗುವ ಸಾಧ್ಯತೆಯಿದೆ.
ಪ್ರತಿ ಕಂಬಳದಲ್ಲಿ ತಪ್ಪದೆ ಭಾಗವಹಿಸುವ ಕೋಣಗಳನ್ನು ಸಣ್ಣಂದಿನಿಂದಲೇ ವಿಶೇಷ ಆಸಕ್ತಿ ವಹಿಸಿ ಸಾಕಲಾಗುತ್ತದೆ. ಕಂಬಳ ಕೋಣಗಳನ್ನು ಇತರ ಜಾನುವಾರುಗಳಂತೆ ಸಾಮಾನ್ಯವಾಗಿ ನೋಡಿಕೊಳ್ಳದೆ, ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಈ ಕಂಬಳ ಕೋಣಗಳನ್ನು ಉಳುಮೆಗೆ ಅಥವಾ ಇನ್ಯಾವುದೆ ಚಟುವಟಿಕೆಗಳಿಗೆ ಬಳಸಲಾಗುವುದಿಲ್ಲ. ಕಂಬಳ ಕೋಣದ ಯಜಮಾನರು ಅದಕ್ಕೆ ವಿಶೇಷ ಆಹಾರದ ವ್ಯವಸ್ಥೆಯ ಜೊತೆಗೆ ಆಧುನಿಕ ವ್ಯವಸ್ಥೆಯನ್ನು ಮಾಡುತ್ತಾರೆ. ಕೋಣಗಳಿಗೆ ಸೆಕೆಯಾಗದಂತೆ ಹಲವೆಡೆ ಫ್ಯಾನ್ ವ್ಯವಸ್ಥೆ ಮಾಡಲಾಗಿದ್ದರೆ, ಕೆಲವೆಡೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋಣಗಳಿಗೆ ಸ್ನಾನಕ್ಕೆ ಹಲವೆಡೆ ಕೆರೆಗಳ ವ್ಯವಸ್ಥೆ ಇದ್ದರೆ, ಕೆಲವೆಡೆ ಸ್ವಿಮ್ಮಿಂಗ್ ಪೂಲ್ ತರಹ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇನ್ನು ಅದಕ್ಕೆ ಮಸಾಜ್ ಸೇರಿದಂತೆ ವಿಶೇಷ ಆರೈಕೆಗಳು ಸದಾ ಇರುತ್ತದೆ.
ಲಕ್ಷ ರೂ. ಕೊಟ್ಟು ಕೋಣ ಖರೀದಿ: ಕಂಬಳ ಕೋಣಗಳಿಗೆ ಪ್ರತಿ ದಿನ ಈ ರೀತಿಯ ಆರೈಕೆ ಇರುತ್ತದೆ. ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಅದಕ್ಕೆ ಕಂಬಳದಲ್ಲಿ ಭಾಗಿಯಾಗಲು ತಯಾರಿಗಳು ನಡೆಯುತ್ತಿರುತ್ತವೆ. ಅಂದಾಜು ಪ್ರತಿ ಜೋಡಿ ಕೋಣಕ್ಕೆ ಕಂಬಳ ಕೋಣದ ಯಜಮಾನರು ಪ್ರತಿ ದಿನಕ್ಕೆ 1 ಸಾವಿರದಿಂದ 3 ಸಾವಿರ ರೂಪಾಯಿವರೆಗೆ ಖರ್ಚು ಮಾಡುತ್ತಾರೆ. ಇನ್ನು ಜಾಣ ಮತ್ತು ಗೆಲುವು ತರುವ ಕೋಣಗಳನ್ನು ಲಕ್ಷಾಂತರ ಕೊಟ್ಟು ಖರೀದಿಸುವ ಕ್ರಿಯೆಗಳು ನಡೆಯುತ್ತವೆ.