ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ತಮಿಳುನಾಡಿನಿಂದ ಬಂದವರು ಕಾರಣ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಆರೋಪದ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ಅದರ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯದ ಮುಂದಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶೋಭಾ ಕರಂದ್ಲಾಜೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅಲ್ಲದೆ, ಪ್ರಕರಣಕ್ಕೆ ತಡೆ ನೀಡಿತು. ಪ್ರತಿವಾದಿಗಳಾದ ಕಾಟನ್‌ಪೇಟೆ ಪೊಲೀಸರು ಹಾಗೂ ದೂರು ದಾಖಲಿಸಿದ್ದ ಚುನಾವಣಾ ನೀತಿ ಸಂಹಿತೆ ಸಂಚಾರಿ ದಳದ ಅಧಿಕಾರಿ ಎಂ.ಎನ್. ಶಿವರಾಜು ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಶೋಭಾ ಕರಂದ್ಲಾಜೆ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಇತ್ತೀಚೆಗೆ ನಗರ್ತಪೇಟೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅರ್ಜಿದಾರರು, ಒಬ್ಬ ವ್ಯಕ್ತಿ ತಮಿಳುನಾಡಿನಿಂದ ಬಂದು ಬಾಂಬ್ ಸ್ಪೋಟಿಸಿ ಹೋಗುತ್ತಾನೆ, ಮತ್ತೊಬ್ಬ ಕೇರಳದಿಂದ ಬಂದು ಆಸಿಡ್ ದಾಳಿ ನಡೆಸುತ್ತಾನೆ, ಇನ್ನೊಬ್ಬ ದೆಹಲಿಯಿಂದ ಬಂದು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾನೆ ಎಂದು ಹೇಳಿದ್ದರು. ಅದಕ್ಕೆ, ಇದು ದೇಶದ ಜನರ ನಡುವೆ ದ್ವೇಷ ಹುಟ್ಟು ಹಾಕುವಂತಹದ್ದು, ಸಮುದಾಯಗಳ ನಡುವೆ ಕೋಮು ಪ್ರಚೋದನೆ ನೀಡುವಂತಹದ್ದು ಎಂದು ದೂರಿನಲ್ಲಿ ಹೇಳಲಾಗಿದೆ.
ಆದರೆ, ಭಾಷಣದಲ್ಲಿ ಯಾವುದೇ ಧರ್ಮ, ಜಾತಿ, ಪಂಗಡವನ್ನು ಉಲ್ಲೇಖಿಸಲಾಗಿಲ್ಲ. ಎಫ್‌ಐಆರ್ ದಾಖಲಿಸುವ ಮೊದಲು ದೂರುದಾರರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು. ಆದ್ದರಿಂದ ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಎಫ್‌ಐಆರ್ ದಾಖಲಿಸಿರುವುದು ಕಾನೂನಿನ ದುರ್ಬಳಕೆ ಆಗಿದೆ. ಹಾಗಾಗಿ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶೋಭಾ ಕರಂದ್ಲಾಜೆ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು, ಅಲ್ಲದೇ ಮಾತಿಗೆ ಅಳತೆಗೋಲು ಇರಲಿ ಎಂದು ಸಲಹೆ ನೀಡಿತು. ಅಲ್ಲದೆ, ಯಾವುದೇ ಪಕ್ಷ ಇರಲಿ ರಾಜಕೀಯ ನಾಯಕರು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬಹುದು. ಆದರೆ ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ. ಮಾತಿನ ಮೇಲೆ ಸಂಯಮ ಇರಲಿ ಎಂದು ಪೀಠದ ಮನವಿ ಮಾಡಿಕೊಂಡಿರುವುದಾಗಿ ನಿಮ್ಮ ಕಕ್ಷಿದಾರರಿಗೆ ಹೇಳಿ ಎಂದು ಅರ್ಜಿದಾರರ ವಕೀಲರಿಗೆ ತಿಳಿಸಿತು.
ಪ್ರಕರಣದ ಹಿನ್ನೆಲೆ:ಕಳೆದ ಕೆಲ ದಿನಗಳ ಹಿಂದೆ ನಗರ್ತಪೇಟೆಯಲ್ಲಿ ನಡೆಸಿದ ಪ್ರತಿಭಟನಾ ವೇಳೆ ತಮಿಳುನಾಡಿನಿಂದ ನಗರಕ್ಕೆ ಬಂದು ಬಾಂಬ್ ಬ್ಲಾಸ್ಟ್ ಮಾಡ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ನಡುವೆ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದ್ದರು. ಈ ಮಧ್ಯೆ, ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸೂಚನೆ ನೀಡಿತು. ಅದರಂತೆ, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂಓದಿ:5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ - Board Exams