ಕರ್ನಾಟಕ

karnataka

ETV Bharat / state

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಪ್ರಭಾವ: ನಡ್ಡಾ ವಿರುದ್ಧದ ಎಫ್​ಐಆರ್​ ರದ್ದುಪಡಿಸಿದ ಹೈಕೋರ್ಟ್ - HIGH COURT

ಕೇಂದ್ರ ಸಚಿವ ಜೆ. ಪಿ ನಡ್ಡಾ ವಿರುದ್ದದ ಎಫ್​ಐಆರ್​ನ್ನು ಹೈಕೋರ್ಟ್​ ರದ್ದುಪಡಿಸಿ ಆದೇಶಿಸಿದೆ.

high-court
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 7, 2024, 10:32 PM IST

ಬೆಂಗಳೂರು :ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಸಂದರ್ಭದಲ್ಲಿ ಬಿಜೆಪಿಗೆ ಮತ ನೀಡಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ಕರ್ನಾಟಕವು ವಂಚಿತವಾಗದಂತೆ ನೋಡಿಕೊಳ್ಳಿ ಎಂಬುದಾಗಿ ಪ್ರಚಾರ ನಡೆಸುವ ಮೂಲಕ ಮತದಾರರಿಗೆ ಪ್ರಭಾವ ಬೀರಿದ ಆರೋಪದಲ್ಲಿ ಶಿಗ್ಗಾವಿ ಪೊಲೀಸ್​ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ. ಪಿ ನಡ್ಡಾ ವಿರುದ್ಧದ ಎಫ್​ಐಆರ್​ನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಹಾವೇರಿ ಪ್ರಧಾನ ಸಿವಿಲ್‌ ನ್ಯಾಯಾಲಯದ ಮುಂದಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಜೆ. ಪಿ ನಡ್ಡಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ನಡ್ಡಾ ಪರ ವಕೀಲರು, ಚುನಾವಣಾ ಸಮಾವೇಶದಲ್ಲಿ ಭಾಷಣವನ್ನು ಪರಿಶೀಲಿಸಿದರೆ ಅದರಲ್ಲಿ ಐಪಿಸಿ ಸೆಕ್ಷನ್‌ಗಳಾದ 171ಸಿ (ಚುನಾವಣೆಯ ಮೇಲೆ ಪ್ರಭಾವ ಬೀರುವುದು) ಮತ್ತು 171ಎಫ್‌ (ಚುನಾವಣೆಯ ಮೇಲೆ ಪ್ರಭಾವ ಬೀರಿದ್ದಕ್ಕೆ ಶಿಕ್ಷೆ) ಅಡಿ ಯಾವುದೇ ಅಪರಾಧ ಕಾಣಸಿಗುವುದಿಲ್ಲ. ಇದರಲ್ಲಿ ಪ್ರಭಾವ ಬೀರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ತಿರುಳಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಮೌಖಿಕವಾಗಿ ಭಾಷಣ ಮತ್ತು ಪ್ರಕರಣದಲ್ಲಿ ಏನೂ ಇಲ್ಲ ಎಂದು ಎಫ್‌ಐಆರ್‌ ವಜಾ ಮಾಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ :ಕಳೆದ ವಿಧಾನಸಭೆ ಚುನಾವಣೆ ಹಿನ್ನೆಲೆ 2023ರ ಏಪ್ರಿಲ್‌ 19 ರಂದು ಮಧ್ಯಾಹ್ನ 1.15 ರಿಂದ 1.50 ರ ಅವಧಿಯಲ್ಲಿ ಶಿಗ್ಗಾವಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಜೆ. ಪಿ ನಡ್ಡಾ, ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಒಲವು ಗಳಿಸಿರಿ.

ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ ಚುನಾವಣಾಧಿಕಾರಿಯಾಗಿದ್ದ ಲಕ್ಷ್ಮಣ್‌ ನಂದಿ ಅವರು ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೆ. ಪಿ ನಡ್ಡಾ ಅವರು ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ :ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ; ಸೈಲ್​ ಸೇರಿ ಮತ್ತಿತರರು ಹೈಕೋರ್ಟ್​ಗೆ ಅರ್ಜಿ; ಸಿಬಿಐಗೆ ನೋಟಿಸ್​ ಜಾರಿ

ABOUT THE AUTHOR

...view details