ಬೆಂಗಳೂರು :ಕಾವೇರಿ ನದಿಗೆ ಅಸ್ಥಿ ವಿಸರ್ಜನೆ ಸೇರಿ ಇತರ ಮಾಲಿನ್ಯಕಾರಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಈ ಸಂಬಂಧ ಮಾರ್ಗಸೂಚಿಗಳನ್ನು ರಚನೆ ಮಾಡುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಕುರಿತು ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು ನಿವಾಸಿ ವಕೀಲ ಕುಶಾಲ್ ಕುಮಾರ್ ಕೌಶಿಕ್ ಸೇರಿ ಆರು ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ನ್ಯಾ. ಕೆ. ವಿ ಅರವಿಂದ ಅವರಿದ್ದ ವಿಭಾಗೀಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಡ್ಯ ಜಿಲ್ಲಾಧಿಕಾರಿ, ಮಂಡ್ಯ ಉಪ ವಿಭಾಗಾಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್, ಶ್ರೀರಂಗಪಟ್ಟಣ ನಗರಸಭೆಗೆ ನೋಟಿಸ್ ಜಾರಿ ಮಾಡಿ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರು ಖುದ್ದು ವಾದ ಮಂಡಿಸಿ, ಅಸ್ಥಿ ವಿಸರ್ಜನೆ ಕ್ರಿಯೆಗೆ ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೊಂದು ನಿಗದಿತ ಸ್ಥಳ ನಿಗದಿ ಮಾಡಬೇಕು. ನಿರ್ದಿಷ್ಟ ಮಾರ್ಗಸೂಚಿಗಳು ಇರಬೇಕು. ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂಬುದಷ್ಟೇ ನಮ್ಮ ಕಾಳಜಿ. ಏಕೆಂದರೆ, ಕಾವೇರಿ ನದಿ ತೀರದಲ್ಲಿ ಮಾಲಿನ್ಯ ವಿಪರೀತವಾಗಿ ಹೆಚ್ಚಳವಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ವರದಿಯಲ್ಲಿ ಕಾವೇರಿ ನದಿ ತೀರದಲ್ಲಿ ಮಾಲಿನ್ಯ ಹೆಚ್ಚಾಗುವುದಕ್ಕೆ ಕಾರಣಗಳನ್ನು ಉಲ್ಲೇಖಿಸಲಾಗಿದೆ.
ಅಸ್ಥಿ ವಿಸರ್ಜಿಸಲು ಮಾರ್ಗಸೂಚಿ ರೂಪಿಸಬೇಕು:ಇದನ್ನು ಪರಿಗಣಿಸಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆಗೆ ಮಾರ್ಗಸೂಚಿ ರೂಪಿಸಬೇಕು. ಕಾವೇರಿ ನದಿಯನ್ನು ‘ಜ್ಯುರಿಸ್ಟಿಕ್ ಪರ್ಸನ್’ (ಕಾನೂನಾತ್ಮಕ ವ್ಯಕ್ತಿ - ವಾಸ್ತವ ವ್ಯಕ್ತಿಯಲ್ಲದ ಆದರೆ ಕಾನೂನಿನನ್ವಯ ಮಾನ್ಯ ಮಾಡಲಾದ ಸಂಘ ಸಂಸ್ಥೆಗಳು, ನಿಸರ್ಗದ ಭಾಗಗಳನ್ನು ವ್ಯಕ್ತಿಗಳ ರೀತಿಯಲ್ಲಿ ಕಾನೂನಾತ್ಮಕವಾಗಿ ಪರಿಗಣಿಸುವುದು) ಎಂದು ಘೋಷಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಹಿಂದೆ ಸಾಮಾನ್ಯವಾಗಿ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿ ವಿಸರ್ಜನೆ ನಡೆಯುತ್ತಿತ್ತು. ಈಗ ನದಿಯ ತೀರದ ಎಲ್ಲ ಕಡೆಗಳಲ್ಲೂ ಅಸ್ಥಿ ವಿಸರ್ಜನೆ ನಡೆಸಲಾಗುತ್ತಿದೆ. ಇದೇ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿದೆ. ಜತೆಗೆ ಭಕ್ತಾದಿಗಳಿಗೆ ಇದೇ ನೀರನ್ನು ಅಭಿಷೇಕವಾಗಿ ನೀಡಲಾಗುತ್ತದೆ. ಕನಿಷ್ಠ ಪಕ್ಷ ಶ್ರೀರಂಗಪಟ್ಟದ ನಿಮಿಷಾಂಭ ದೇವಸ್ಥಾನದ ತೀರದಲ್ಲಿಯಾದರೂ ಅಸ್ಥಿ ವಿಸರ್ಜನೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಈಗ ಮುಂಗಾರು ಮಳೆ ವ್ಯಾಪಕವಾಗಿದ್ದು, ಅರೆಬೆಂದ ಮೂಳೆಗಳು ದೇವಸ್ಥಾನದ ಬಳಿ ಬಂದು ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಜ್ಯುರಿಸ್ಟಿಕ್ ಪರ್ಸನ್ ಎಂದು ಪರಿಗಣಿಸಬೇಕು:ಕಾವೇರಿ ನದಿ ತೀರದ ನಿರ್ದಿಷ್ಟ ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆಗೆ ಅವಕಾಶ ಮಾಡಿ ಮಾರ್ಗಸೂಚಿ ರೂಪಿಸಬೇಕು. ಉತ್ತರಾಖಂಡ ಹೈಕೋರ್ಟ್ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳನ್ನು ‘ಜ್ಯುರಿಸ್ಟಿಕ್ ಪರ್ಸನ್’ ಎಂದು ಘೋಷಿಸಿದ್ದು, ಅದೇ ರೀತಿ ಕಾವೇರಿ ನದಿಯನ್ನೂ ‘ಜ್ಯುರಿಸ್ಟಿಕ್ ಪರ್ಸನ್’ ಎಂದು ಪರಿಗಣಿಸಬೇಕು. ಕಾವೇರಿ ನದಿಯ ವ್ಯಕ್ತಿಗಳು ಎಂದು ಪರಿಗಣಿಸಿ ಸಮಿತಿಯೊಂದನ್ನು ರಚಿಸಬೇಕು. ಇವರು ನದಿಗೆ ಹಾನಿ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದರು.
ಅಲ್ಲದೆ, ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಮತ್ತು ನಿಮಿಷಾಂಭ ದೇವಸ್ಥಾನದ ಸಮೀಪ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕು. ನದಿಗೆ ಹೂವು, ಪ್ಲ್ಯಾಸ್ಟಿಕ್ ಬ್ಯಾಗ್ ಮತ್ತು ಬಟ್ಟೆ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವುಗಳ ಮರುಬಳಕೆಗೆ ವ್ಯವಸ್ಥೆ ಮಾಡಬೇಕು. ನದಿ ತೀರದಲ್ಲಿನ ಭೂ ಮಾಲೀಕರು ತಮ್ಮ ಜಮೀನನ್ನು ಅಸ್ಥಿ ವಿಸರ್ಜನೆ ಮತ್ತಿತರರ ಚಟುವಟಿಕೆಗಳಿಗೆ ನೀಡಿ ಹಣ ಮಾಡುವುದಕ್ಕೆ ನಿರ್ಬಂಧಿಸಬೇಕು.
ಸಾಮೂಹಿಕ ಸ್ನಾನಕ್ಕೆ ಶ್ಯಾಂಪೂ, ಸೋಪು, ಬಾಡಿ ವಾಷ್, ಡಿಟರ್ಜೆಂಟ್ ಬಳಕೆಗೆ ನಿಷೇಧ ವಿಧಿಸಬೇಕು. ಅಗತ್ಯ ಶೌಚಾಲಯ ನಿರ್ಮಿಸಬೇಕು ಮತ್ತು ಅಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಿಸಿ ನದಿಗೆ ಬಿಡಲು ವ್ಯವಸ್ಥೆ ಮಾಡಬೇಕು. ಶ್ರೀರಂಗಪಟ್ಟಣದ ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಬಿಡುವುದಕ್ಕೆ ಕ್ರಮವಹಿಸಬೇಕು. ನದಿಯಲ್ಲಿ ಗೋವುಗಳಿಗೆ ಸ್ನಾನ ಮಾಡಿಸುವುದು ಸೇರಿದಂತೆ ಮಾಲಿನ್ಯಕಾರಕ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಅರ್ಜಿಯನ್ನು ಮನವಿ ಮಾಡಿದ್ದರು.
ಇದನ್ನೂ ಓದಿ :ಸ್ವಾಧೀನಾನುಭವ ನೀಡಿದ ನಂತರವಷ್ಟೇ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು: ಹೈಕೋರ್ಟ್ - Tax Only After Occupancy