ರಾಯಚೂರು : ಮೀಥೇನ್ ಆಯಿಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಸೋರಿಕೆಯಾಗಿರುವ ಘಟನೆ ತಾಲೂಕಿನ ರಾಯಚೂರು - ಮಂತ್ರಾಲಯ ಹೈವೇ ರಸ್ತೆಯಲ್ಲಿ ಬರುವ ಗುಜಳ್ಳಿ ಗ್ರಾಮದ ಬಳಿ ಜರುಗಿದೆ.
ಮುಂಬೈನಿಂದ ಕರ್ನೂಲ್ ಕಡೆ ಮೀಥೇನ್ ತುಂಬಿಕೊಂಡು ಲಾರಿ ತೆರಳುತ್ತಿತ್ತು. ಮಾರ್ಗ ಮದ್ಯ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಮೀಥೇನ್ ಆಯಿಲ್ ಸೋರಿಕೆಯಾಗಿದ್ದರಿಂದ ಸುತ್ತಮುತ್ತಲಿನ ಜನರಿಗೆ ಆತಂಕವನ್ನುಂಟು ಮಾಡಿತ್ತು. ಘಟನೆಯಿಂದ ಲಾರಿ ಚಾಲಕ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದಂತೆ ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಹಾಗೂ ಯರಗೇರಾ ಸಿಪಿಐ ನಿಂಗಪ್ಪ, ಯರಗೇರಾ ಪಿಎಸ್ಐ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಆರ್ಟಿಪಿಎಸ್, ಸಿಐಎಸ್ಎಫ್ ದಳದ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕಾರ್ಯಾಚರಣೆ ನಡೆಸಿದರು.
ಮೀಥೇನ್ ಆಯಿಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ಬ್ಲಾಸ್ಟ್ ಆಗುವ ಆತಂಕ ಎದುರಾಗಿತ್ತು. ಹೀಗಾಗಿ ನೀರಿನೊಂದಿಗೆ ಮಿಥೇನ್ ಆಯಿಲ್ ಮಿಶ್ರಣ ಮಾಡಿ ಅಗ್ನಿಶಾಮಕ ಸಿಬ್ಬಂದಿ ಟ್ಯಾಂಕರ್ ಖಾಲಿ ಮಾಡಿದ್ದಾರೆ. ಒಂದು ವೇಳೆ ಬ್ಲಾಸ್ಟ್ ಆಗಿದ್ದರೆ ಸುಮಾರು ಎರಡು ನೂರು ಮೀಟರ್ವರೆಗೂ ಅಪಾಯ ಸಂಭವಿಸುತ್ತಿತ್ತು ಎಂದು ಎಚ್ಚರಿಸಿರುವ ಅಧಿಕಾರಿಗಳು, ಈ ಬಗ್ಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಯರಗೇರಾ ಪೊಲೀಸರನ್ನ ಸಂಪರ್ಕಿಸಿದಾಗ, ಮುಂಬೈನಿಂದ ಕರ್ನೂಲ್ ಕಡೆ ಲಾರಿ ತೆರಳುತ್ತಿತ್ತು. ಗುಂಜಳ್ಳಿ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಲಾರಿಯಲ್ಲಿದ್ದ ಮೀಥೇನ್ ಆಯಿಲ್ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬೈಕ್ಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಬಸ್: ಮದುವೆಗೆ ತೆರಳುತ್ತಿದ್ದ ಇಬ್ಬರ ದುರ್ಮರಣ - BUS BIKE ACCIDENT