ಕರ್ನಾಟಕ

karnataka

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ - High Court

By ETV Bharat Karnataka Team

Published : Aug 30, 2024, 11:02 PM IST

ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನ ಹೈಕೋರ್ಟ್​ ವಜಾಗೊಳಿಸಿದೆ.

high-court
ಹೈಕೋರ್ಟ್ (ETV Bharat)

ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಹಾಗೂ ಪ್ರಕರಣದಿಂದ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಕೋರಿ ವಿದ್ಯಾರ್ಥಿನಿ ತಂದೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಪ್ರಕರಣದಿಂದ ಕಾರ್ಕಳ ತಾಲೂಕಿನ ಕುಕುಂದೂರಿನ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಸಿಬಿಐ ತನಿಖಾಧಿಕಾರಿಗಳು ಹೈಕೋರ್ಟ್‌ಗೆ ಪ್ರತ್ಯೇಕ ಕ್ರಿಮಿನಲ್‌ ಮೇಲ್ಮನವಿಗಳನ್ನು ಸಲ್ಲಿಸಿದ್ದರು. ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಮತ್ತು ನ್ಯಾಯಮೂರ್ತಿ ಜೆ. ಎಂ ಖಾಜಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ : 2012 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯ ಕೊಲೆ ಮತ್ತು ಅತ್ಯಾಚಾರ ಘಟನೆ ನಡೆದಿತ್ತು. ಪ್ರಕರಣವನ್ನು ಮೊದಲಿಗೆ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2012ರ ನ.6ರಂದು ತನಿಖೆಯನ್ನು ಸಿಬಿಐಗೆ ವಹಿಸಿ ಸರ್ಕಾರ ಆದೇಶಿಸಿತ್ತು. ತನಿಖಾಧಿಕಾರಿಗಳು ಕಾರ್ಕಳ ಮೂಲದ ಸಂತೋಷ್ ರಾವ್ ಎಂಬಾತನನ್ನು ಆರೋಪಿಯಾಗಿ ಗುರುತಿಸಿದ್ದರು. ಆತನನ್ನು 2023ರ ಜು.16ರಂದು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದ ಬಾಲಕಿ ತಂದೆ, ಸಿಬಿಐ ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದೇಳಿ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿದೆ. ಆ ಆದೇಶದಲ್ಲಿ ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳು) ಈ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಗೋಲ್ಡನ್‌ ಹವರ್‌ ಅಲ್ಲಿ ತನಿಖೆಯನ್ನು ಸಮರ್ಪಕವಾಗಿ ಮಾಡಿಲ್ಲವೆಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಇದರಿಂದ ಇಡೀ ತನಿಖೆ ನ್ಯಾಯೋಚಿತವಾಗಿ ತನಿಖೆ ನಡೆಸಿಲ್ಲ ಎಂಬುದು ಸ್ಪಷ್ಟವಾಗಲಿದೆ. ಆದ ಕಾರಣ ಮರು ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿದ್ದರು.

ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ರದ್ದತಿಗೆ ಕೋರಿದ್ದ ಸಿಬಿಐ ತನಿಖಾಧಿಕಾರಿಗಳು, ಬಾಲಕಿ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್‌ ರಾವ್‌ನನ್ನು ಬಂಧಿಸಲಾಗಿತ್ತು. ಆತ ಆ ಊರಿನವನಲ್ಲ. ಘಟನಾ ಸ್ಥಳದಲ್ಲಿ ಏಕೆ ಇದ್ದ ಎಂಬುದಕ್ಕೆ ಆತ ವಿವರಣೆ ನೀಡಿಲ್ಲ. ಬೆನ್ನು ಹಾಗೂ ಮಂಡಿಯಲ್ಲಿ ಗಾಯವಾಗಿರುವುದಕ್ಕೂ ಸೂಕ್ತ ವಿವರಣೆ ನೀಡಿಲ್ಲ. ಘಟನಾ ಸ್ಥಳದಲ್ಲಿ ಬಿಳಿ ಪಂಚೆ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಆತನ ಕೂದಲು ಸಿಕ್ಕಿದೆ. ಈ ಕೂದಲು ಆತನದೇ ಎಂಬುದು ಡಿಎನ್‌ಎ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ, ಸಂತೋಷ್‌ ರಾವ್‌ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ. ಆದ್ದರಿಂದ ಆತನನ್ನು ದೋಷಿಯಾಗಿ ಪರಿಗಣಿಸಿ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಬೇಕು ಎಂದು ಕೋರಿದ್ದರು.

ಅಲ್ಲದೆ, ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ತನಿಖಾಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸಲು ಮತ್ತು ತನ್ನ ವಿರುದ್ಧ ತನಿಖಾಧಿಕಾರಿಗಳು ದುರುದ್ದೇಶಪೂರಿತ ಪ್ರಾಸಿಕ್ಯೂಷನ್‌ ನಡೆಸಿರುವ ಹಿನ್ನೆಲೆ ತನಗೆ 50 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸಂತೋಷ್‌ ರಾವ್‌ ನ್ಯಾಯಾಲಯವನ್ನು ಕೋರಿದ್ದರು.

ಇದನ್ನೂ ಓದಿ :ಲೈಂಗಿಕ ದೌರ್ಜನ್ಯ ಆರೋಪ: ರೇವಣ್ಣ ವಿರುದ್ಧ ಸೆ.19ರವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ ನಿರ್ದೇಶನ - Sexual Assault Case

ABOUT THE AUTHOR

...view details