ಕರ್ನಾಟಕ

karnataka

ETV Bharat / state

ಜಗಜಟ್ಟಿಗಳನ್ನು ತಯಾರು ಮಾಡಿದ್ದ ಗಂಡುಭೂಮಿಯಲ್ಲಿ ಕ್ಷೀಣಿಸುತ್ತಿವೆ ಪೈಲ್ವಾನರ ಗರಡಿಗಳು: ಹಿನ್ನೆಲೆ - ಇತಿಹಾಸವೇನು? - PAILWANS GARADI HOUSES

ದಾವಣಗೆರೆ ಕುಸ್ತಿಯಿಂದಾಗಿಯೇ ಇತಿಹಾಸ ಪ್ರಸಿದ್ದ. ಇಂತಹ ಜಿಲ್ಲೆಯಲ್ಲಿ ಪೈಲ್ವಾನ್​ರ ಗರಡಿಗಳು ನಶಿಸುವ ಹಂತಕ್ಕೆ ತಲುಪಿವೆ. ಇದಕ್ಕೆ ಕಾರಣ ಹಲವಾರು. ಆದರೆ ಈಗ ಪೈಲ್ವಾನ್​ರಗಳತ್ತ ರಾಜ್ಯ ಸರ್ಕಾರ ಗಮನಹರಿಸಬೇಕಾಗಿದೆ.

THE GARADI HOUSES OF THE PAILWANS ARE DETERIORATING IN DAVANAGERE
ಜಗಜಟ್ಟಿಗಳನ್ನು ತಯಾರು ಮಾಡಿದ್ದ ಗಂಡುಭೂಮಿಯಲ್ಲಿ ಕ್ಷೀಣಿಸುತ್ತಿವೆ ಪೈಲ್ವಾನರ ಗರಡಿಗಳು: ಬೇಕಿದೆ ಸರ್ಕಾರದ ಚಿತ್ತ (ETV Bharat)

By ETV Bharat Karnataka Team

Published : Feb 22, 2025, 9:39 AM IST

ವಿಶೇಷ ವರದಿ - ನೂರ್​​​

ದಾವಣಗೆರೆ:ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಹೋರಾಟಗಾರರನ್ನು ಕೊಡುಗೆಯಾಗಿ ನೀಡಿರುವ ಜಿಲ್ಲೆ. ರಾಜ್ಯ - ಅಂತಾರಾಜ್ಯ ಮಟ್ಟದಲ್ಲಿ ಜಗಜಟ್ಟಿಗಳನ್ನು ತಯಾರು ಮಾಡಿದ ಗಂಡುಭೂಮಿ ಎಂಬ ಹೆಸರುಂಟು. ಇಲ್ಲಿನ ಮಣ್ಣಿನಲ್ಲಿ ಸೆಣಸಾಡಿ ತಯರಾದ ಅದೆಷ್ಟೋ ಪೈಲ್ವಾನರು ದಾವಣಗೆರೆ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದ ಕೀರ್ತಿ ಸಲ್ಲುತ್ತದೆ.

ಗರಡಿಗಳಲ್ಲಿ ಸೆಣಸಲು ಪೈಲ್ವಾನ್ ಇಲ್ಲದೆ ಸೊರಗುತ್ತಿರುವ ಗರಡಿ ಮನೆ (ETV Bharat)

ತೋಳು - ತೊಡೆ ತಟ್ಟಿ ಕುಸ್ತಿ ಅಖಾಡದಲ್ಲಿ ಮುನ್ನುಗ್ಗಿ, ಪಟ್ಟುಗಳನ್ನು ಹಾಕುತ್ತ, ಎದುರಾಳಿ ಎದೆ ಝಲ್ಲೆನೆಸುವ ಪೈಲ್ವಾನರನ್ನು ನೀಡಿದ ಇಲ್ಲಿನ ಐತಿಹಾಸಿಕ ಗರಡಿಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ.‌ ದುರಂತ ಎಂದರೇ ಅ ಗರಡಿಗಳು ನಶಿಸುವ ಹಂತಕ್ಕೆ ತಲುಪಿವೆ.

ಗಂಡುಭೂಮಿಯಲ್ಲಿ ಕ್ಷೀಣಿಸುತ್ತಿವೆ ಪೈಲ್ವಾನರ ಗರಡಿಗಳು: ಹಿನ್ನೆಲೆ - ಇತಿಹಾಸವೇನು? (ETV Bharat)

ದಾವಣಗೆರೆ ‌ಜಿಲ್ಲೆಯಲ್ಲಿ ನೂರಾರು ಗರಡಿಗಳು ನಶಿಸಿ ಹೋಗುತ್ತಿವೆ. ಅಲ್ಲೊಂದು ಇಲ್ಲೊಂದು ಎಂಬಂತೆ ನಾಲ್ಕೈದು ಜನ ಪೈಲ್ವಾನರು ಮಾತ್ರ ಗರಡಿಗಳಲ್ಲಿ ಸೆಣಸಾಟ ನಡೆಸುತ್ತಿದ್ದಾರೆ. ಯುವಕರು ಮಾತ್ರ ಜಿಮ್​ಗಳ ಹಿಂದೆ ಬಿದ್ದು ಗರಡಿ ಮನೆಗಳಿಗೆ ತೆರಳಲು ಮೂಗು ಮುರಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಗರಡಿಗಳಲ್ಲಿ ಸೆಣಸಲು ಪೈಲ್ವಾನ್ ಇಲ್ಲದೇ ಮಣ್ಣು ಹದ ಮಾಡದೆ ಇರುವುದರಿಂದ ಗರಡಿಗಳು ಸೊರಗುತ್ತಿವೆ.

ಪೈಲ್ವಾನರು (ETV Bharat)

ಇಲ್ಲಿನ ನಗರದ ಜೈಹಿಂದ್​​​ ಕೆರೆ ಗರಡಿ, ಮಕಾನ್​​ ಗರಡಿಗಳಿಗೆ ವಿಶೇಷ ಇತಿಹಾಸ ಇದೆ. ಈ ಎರಡು ಗರಡಿಗಳಲ್ಲಿ ಇಂದಿಗೂ ನೂರಾರು ಪೈಲ್ವಾನರುಗಳು ಕಲಿತು ದಾವಣಗೆರೆಗೆ ಕೀರ್ತಿ ತಂದಿದ್ದಾರೆ. ಜೈಹಿಂದ್ ಕೆರೆ ಗರಡಿ, ಮಕಾನ್ ಗರಡಿಗಳಿಗೆ 100 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಹಿರಿಯ ಪೈಲ್ವಾನ್ ಯಶವಂತ್ ರಾವ್ ಜಾಧವ್.

ಪೈಲ್ವಾನ್​ಗಳಿಲ್ಲದೆ ಇಲ್ಲದೇ ಮಣ್ಣು ಹದ ಮಾಡದೆ ಸೊರಗುತ್ತಿರುವ ಗರಡಿಗಳು. (ETV Bharat)

ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಕೀರ್ತಿ ಪತಾಕೆ ಹಾರಿಸಿದ್ದ ಪೈಲ್ವಾನರು:ಇಲ್ಲಿನ ಗರಡಿ ಮನೆಗಳಲ್ಲಿ ತಾಲೀಮು ನಡೆಸಿದ ನೂರಾರು ಜಟ್ಟಿಗಳು, ರಾಜ್ಯ - ಅಂತಾರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಗೆದ್ದು, ಪದಕ, ಪ್ರಮಾಣ ಜನಕಪತ್ರಗಳನ್ನು ದಾವಣಗೆರೆಗೆ ಕೊಡುಗೆಯಾಗಿ ನೀಡಿದ್ದಾರೆ.

ಗರಡಿ ಮನೆ (ETV Bharat)

ಗರಡಿ ಮನೆಗಳಲ್ಲಿ ಸೊರಗುತ್ತಿವೆ ತಾಲೀಮು ಪರಿಕರಗಳು:ಗರಡಿ ಮನೆಗಳಲ್ಲಿ ಯುವ ಪೈಲ್ವಾನರುಗಳು ಇಲ್ಲದೆ ಹಳೇಯ ತಾಲೀಮು ಪರಿಕರಗಳಾದ ಕಲ್ಲಿನ ಗದೆ, ಕಲ್ಲಿನ ದುಂಡಿ, ಭಾರವಾದ ಕಬ್ಬಿಣದ ಸಲಾಕೆಗಳು ಸೊರಗುತ್ತಿವೆ. ಇಂದಿನ ಯುವಕರು ಅಷ್ಟಾಗಿ ಗರಡಿ ಮನೆಗಳತ್ತ ತೆರಳಿ ಸಾಮ್​ ತೆಗೆಯುವತ್ತ ಮನಸ್ಸು ಮಾಡುತ್ತಿಲ್ಲ. ಇದರಿಂದ ಸರ್ಕಾರ ಗರಡಿ ಮನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಕ್ರೀಡೆ ಉಳಿಸಲು ಮುಂದಾಗಬೇಕಿದೆ. ಹಬ್ಬ- ಜಾತ್ರೆಗಳ ಸಂದರ್ಭದಲ್ಲಿ ಖಾಸಗಿಯಾಗಿ ಕುಸ್ತಿ ಪಂದ್ಯಗಳನ್ನು ನಡೆಸಲಾಗುತ್ತದೆ. ಮುಜರಾಯಿ ದೇವಸ್ಥಾನಗಳ ವ್ಯಾಪ್ತಿಯ ಜಾತ್ರೆಗಳ ಸಂದರ್ಭದಲ್ಲೂ ಕುಸ್ತಿ ಕ್ರೀಡೆಗೆ ಉತ್ತೇಜಿಸಿದಲ್ಲಿ ಅನುಕೂಲವಾಗಲಿದೆ ಎಂಬುದು ಕುಸ್ತಿಪ್ರಿಯರ ಮಾತು.

ಜಿಮ್​ನಿಂದ ಗರಡಿ ಮನೆಗಳಿಗೆ ತೆರಳಲು ಮೂಗು ಮುರಿಯುತ್ತಿರುವ ಯುವಕರು (ETV Bharat)

08 -10 ಗರಡಿಗಳ ಪೈಕಿ, ಎರಡು ಮಾತ್ರ ಚಾಲ್ತಿಯಲ್ಲಿವೆ: "ದಾವಣಗೆರೆ ನಗರದಲ್ಲಿ ಒಟ್ಟು 08-10 ಗರಡಿ ಮನೆಗಳಿವೆ. ಈ ಪೈಕಿ ಮಕಾನ್​​​ ಗರಡಿ ಮನೆ, ಜೈಹಿಂದ್​​​ ಕೆರೆ ಗರಡಿ ಮನೆ ಚಾಲ್ತಿಯಲ್ಲಿವೆ. ಜೈಹಿಂದ್ ಕೆರೆಗರಡಿಯಲ್ಲಿ ಪೈಲ್ವಾನ್ ಭರಮಜ್ಜ, ಪೈಲ್ವಾನ್ ಸಣ್ಣೀಲಪ್ಪನವರು ಗರಡಿ ಕುಸ್ತಿ ಆರಂಭಿಸಿ 100 ವರ್ಷಗಳೇ ದಾಟಿವೆ. ಅಲ್ಲದೇ ಪೈಲ್ವಾನ್ ಸ್ಟಾರ್ ನಾಗಪ್ಪ, ತೋಟಗೀರ ಮಲ್ಲಪ್ಪನವರು, ಚಾರ್ಲಿ ಪೈಲ್ವಾನ್ ದಾವಣಗೆರೆ ಅಲ್ಲದೇ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕುಸ್ತಿಯಲ್ಲಿ ಕೀರ್ತಿ ತಂದವರು, ಷಣ್ಮುಖಣ್ಣ, ಮರಳು ಹರಿಹರ ರಾಮಪ್ಪ, ಸಾದೀಕ್ ಅಲಿ ಬರ್ಕತ್ ಅಲಿ ಪೈಲ್ವಾನ್, ಯಶವಂತ ರಾವ್, ಮಾಲ್ತೇಶ್ ರಾವ್, ಮಂಜು ಪೈಲ್ವಾನ್ ಜೆ ಮನೋಹರ್, ಭರಮಪ್ಪ ಹೀಗೆ ನೂರಾರು ಪೈಲ್ವಾನ್​ಗಳಿದ್ದಾರೆ. ಇಂದಿನ ದಿನಗಳಲ್ಲಿ ಕುಸ್ತಿಗೆ ಪ್ರಾಶಸ್ತ್ಯ ಸಿಗ್ತಿಲ್ಲ, ತಯಾರಾಗಲು ವಸ್ತುಗಳು ದುಬಾರಿಯಾಗಿವೆ.‌ ದುಡ್ಡಿದೆ ಕುಸ್ತಿ ಆಡುವ ಪೈಲ್ವಾನ್​ಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಮಾನ್ಯತೆ ಇಲ್ಲದ ಕಾರಣ ಗರಡಿಗಳು ನಶಿಸಿ ಹೋಗುತ್ತಿವೆ. ಪೈಲ್ವಾನ್​ರಗಳತ್ತ ರಾಜ್ಯ ಸರ್ಕಾರ ಗಮನಹರಿಸಬೇಕಾಗಿದೆ" ಎಂದು ಹಿರಿಯ ಪೈಲ್ವಾನ್ ಯಶವಂತ್ ರಾವ್ ಜಾಧವ್ ತಿಳಿಸಿದ್ದಾರೆ.

ಕುಸ್ತಿ ಅಭ್ಯಾಸದಲ್ಲಿ ಯುವ ಪೈಲ್ವಾನರು (ETV Bharat)

ಕುಸ್ತಿ ಕ್ರೀಡಾಪಟುಗಳಿಗೆ 20 ಸಾವಿರ ಮಾಸಾಶನ..?: "ಸರ್ಕಾರ ಕುಸ್ತಿ ಕ್ರೀಡಾಪಟುಗಳಿಗೆ 20 ಸಾವಿರ ಮಾಸಾಶನ ಕೊಡಬೇಕು. ಇಲ್ಲ ಅಂದರೆ ಈ ದೇಸಿ ಕ್ರೀಡೆ ನಶಿಸಿ ಹೋಗಲಿದೆ. ಒಬ್ಬ ಪೈಲ್ವಾನ್​ ತಯಾರಾಗಲು ಒಂದು ತಿಂಗಳಿಗೆ 50 ಸಾವಿರ ಹಣ ಬೇಕಿದೆ. ಅದಕ್ಕೆ ತಕ್ಕಂತೆ ತರಬೇತಿ ಬೇಕಾಗಿದೆ. ಕಸರತ್ತು ಮಾಡಬೇಕಾಗಿದೆ. ಕುಸ್ತಿ ಗುರುಗಳ ಅವಶ್ಯಕತೆ ಇರುತ್ತದೆ. 04 ಗಂಟೆಯಿಂದ ಪೈಲ್ವಾನ್​ಗಳ ತಾಲೀಮು ಆರಂಭ ಆಗಲಿದೆ.‌ ಕೈಸಾಮ್, ಕಾಲ್ ಸಾಮ್ ತೆಗೆದು, ಗೋದ ಕುಚ್ಚುವುದು (ಮಣ್ಣು ಹದ ಮಾಡುವುದು) ಯಾವ ರೀತಿ ಪಟ್ಟು ಹೊಡೆಯಬೇಕು, ಯಾವುದು ಚಿತ್ ಮಾಡ್ಬೇಕೆಂಬ ಪ್ರೋತ್ಸಾಹ ಹಾಗು ಗುರುಗಳ ಕೊರತೆ ಕಾಣುತ್ತಿದೆ. ಜಾತ್ರೆ ಹಳ್ಳಿಗಳಲ್ಲಿ ಕುಸ್ತಿ ನಡೆಯುತ್ತಿತ್ತು. ಇದೀಗ ಕ್ರಿಕೆಟ್ ಶುರುವಾಗಿದೆ. ‌ಬಾಡಿ ಬಿಲ್ಡಿಂಗ್ ಆದ್ಯತೆ ಹೆಚ್ಚಿದೆ. ಇದು ಪುರಾತನ ಕ್ರೀಡೆ ಇದು ಉಳಿಯಬೇಕು, ದಾವಣಗೆರೆ ಪೈಲ್ವಾನರು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಜನ ಒಂದು ತಾಲೀಮ್​ನಲ್ಲಿ 20-25 ಜನ ತರಬೇತಿ ಪಡೆಯುತ್ತಿದ್ದೆವು. ಇದೀಗ 4-5 ಜನ ಮಾತ್ರ ಗರಡಿಗಳಲ್ಲಿ ತಾಲೀಮು ಮಾಡುವ ಪರಿಸ್ಥಿತಿ ಇದೆ" ಎಂದು ಪೈಲ್ವಾನ್ ಯಶವಂತ್ ರಾವ್ ಬೇಸರ ವ್ಯಕ್ತಪಡಿಸಿದರು.

ಕುಸ್ತಿ ಅಭ್ಯಾಸ (ETV Bharat)

ಸಾಮಾಜಿಕ ಜಾಲತಾಣದಲ್ಲಿ ಯುವಕರು ಮಗ್ನ:ಚಿರ ಯುವಕರು ಜಿಮ್​​ ಹಾಗೂ ಮೊಬೈಲ್​, ಸಾಮಾಜಿಕ ಜಾಲತಾಣದ ಹಿಂದೆ ಬಿದ್ದಿದ್ದಾರೆ. ಯುವಕರು ಮೊಬೈಲ್​ ಹಿಂದೆ ಬಿದ್ದಿದ್ದಾರೆ. ಕ್ರೀಡೆಯಿಂದ ದೂರ ಉಳಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಕುಸ್ತಿ ದೂರ ಉಳಿಯುವಂತೆ ಆಗಿದೆ. ಕುಸ್ತಿ ವಂಶಪಾರಂಪರೆಯಾಗಿ ಬಂದಿದೆ‌. ಗರಡಿ ಮನೆಯಲ್ಲಿ ತಾಲೀಮು ಮಾಡಿ ಹಾಲು, ಬಾಳೆ ಹಣ್ಣು, ಗೋದಿ ಪದಾರ್ಥ, ಮಾಂಸ, ಮೊಟ್ಟೆ ಅವಶ್ಯಕತೆ ಇರುತ್ತದೆ. ದಂಡ ತಾಲೀಮ್, ಮಣ್ಣು ಕಡಿಯುವುದು, ಭಾರ ಎತ್ತುವ ಕೆಲ ಮಾಡುತ್ತೇವೆ" ಎಂದು ಯುವ ಪೈಲ್ವಾನ್​ ಸಿದ್ದು ಮಾಹಿತಿ ನೀಡಿದರು.

ನಗರದ ಜೈಹಿಂದ್​​​ ಕೆರೆ ಗರಡಿ ಮನೆ (ETV Bharat)

ಪೈಲ್ವಾನ್​​ ಸಿನಿಮಾ ನೋಡಿ ಪ್ರೇರಣೆ, ಕುಸ್ತಿ ಕಲಿತ ಯುವ ಪೈಲ್ವಾನ್​​:ಕುಸ್ತಿ ಹಾಗೂ ಗರಡಿ ಮನೆಗಳು ಕ್ಷೀಣಿಸುವ ಹಂತ ತಲುಪಿದೆ. ಇಂತಹುವುದರಲ್ಲಿ ಯುವ ಪೈಲ್ವಾನ್ ಮೌನೇಶ್​ ಎಂಬುವವರು ಕಿಚ್ಚ ಸುದೀಪ್ ಹಾಗೂ ಸುನೀಲ್ ಶೆಟ್ಟಿ ಅವರ ಪೈಲ್ವಾನ್​ ಸಿನಿಮಾ ನೋಡಿ ಪ್ರೇರಣೆಯಾಗಿ ಕುಸ್ತಿ ಕಲಿಯುತ್ತಿದ್ದಾರೆ.‌

ಜೈಹಿಂದ್​​​ ಕೆರೆ ಗರಡಿ, ಮಕಾನ್​​ ಗರಡಿಗಳಿಗೆ ವಿಶೇಷ ಇತಿಹಾಸ (ETV Bharat)

"ಪೈಲ್ವಾನ್​​ ಸಿನಿಮಾ ನೋಡಿ ಪ್ರೇರಣೆಯಾಗಿ ಕುಸ್ತಿ ಕಲಿಯುತ್ತಿದ್ದೇನೆ. ಕುಸ್ತಿ ಹಿಂದಿನ ಕಾಲದಿಂದ ಬಂದಿದೆ. ಕುಸ್ತಿ ಬಗ್ಗೆ ಅಭಿಮಾನ ಹೆಚ್ಚಿದೆ. ಕುಸ್ತಿಯಲ್ಲಿ ಸಾಧನೆ ಮಾಡಲು ಮನೆಯಲ್ಲಿ ಸಪೋರ್ಟ್ ಇರಬೇಕು. ಹಣ ಇರಬೇಕು. ಬಡತನ ಇದ್ದರೂ ಕೆಲಸ ಮಾಡಿ ರೊಕ್ಕ ತಂದು ಕುಸ್ತಿ ಮಾಡಿದ್ದೀನಿ" ಎಂದು ಕುಸ್ತಿ ಬಗ್ಗೆ ತಮಗಿರುವ ಆಸಕ್ತಿಯನ್ನೂ ವ್ಯಕ್ತಪಡಿಸಿದರು.

ಇದನ್ನೂ ಓದಿ:ದಸರಾ ಕುಸ್ತಿ: ದಾವಣಗೆರೆಯ ಬಸವರಾಜ್​ 'ದಸರಾ ಕೇಸರಿ', ಹಳಿಯಾಳದ ಶಾಲಿನಿ 'ದಸರಾ ಕಿಶೋರಿ'

ABOUT THE AUTHOR

...view details