ಬೆಳಗಾವಿ: ಇಬ್ಬರು ಬಾಣಂತಿಯರಿಗೂ ಘಟಪ್ರಭಾ ನದಿಯ ಪ್ರವಾಹದ ಬಿಸಿ ತಟ್ಟಿದ್ದು, ತವರು ಮನೆಯ ಬದಲು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವ ದುಸ್ಥಿತಿ ಬಂದೊದಗಿದೆ. ಹೌದು, ಘಟಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿದುಬಂದ ಹಿನ್ನೆಲೆ ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮ ಭಾಗಶಃ ಮುಳುಗಡೆಯಾಗಿದೆ. ಮನೆಗಳು ನೀರಿನಲ್ಲಿ ಮುಳುಗಡೆ ಆಗಿದ್ದರಿಂದ ಇಬ್ಬರು ಬಾಣಂತಿಯರಿಗೆ ಸಂಕಷ್ಟ ಎದುರಾಗಿದೆ.
ಜನರಿಗೆ ಕಾಳಜಿ ಕೇಂದ್ರದಲ್ಲಿ ಉಳಿಯಲು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ. ಇಬ್ಬರು ಬಾಣಂತಿಯರಿಗೆ ಅಂಗನವಾಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಡೇರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಯರನ್ನು ಆರೈಕೆ ಮಾಡಲಾಗುತ್ತಿದೆ. 20 ದಿನದ ಕಂದಮ್ಮಳೊಂದಿಗೆ ತಾಯಿ ಲಕ್ಷ್ಮಿ ಗಾಣಿಗೇರ, ಒಂದೂವರೆ ತಿಂಗಳ ಕಂದಮ್ಮಳೊಂದಿಗೆ ತಾಯಿ ಹಣಮವ್ವ ಸಣ್ಣಕ್ಕಿನ್ನವರ ಆಶ್ರಯ ಪಡೆದಿದ್ದಾರೆ.