ಬೆಂಗಳೂರು:''ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಸಾಲು ಸಾಲು ವೈಫಲ್ಯಗಳಿಂದ ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲೇ ಜನಪ್ರಿಯತೆ ಕಳೆದುಕೊಂಡಿದ್ದು, ಈಗ ಜನರ ಗಮನ ಬೇರೆಡೆ ಸೆಳೆಯಲು ದೆಹಲಿಯಲ್ಲಿ ಪ್ರತಿಭಟನೆಯ ಬೀದಿನಾಟಕ ಮಾಡಲು ಹೊರಟಿದೆ'' ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಒಂಬತ್ತು ತಿಂಗಳಿಂದ ಅಭಿವೃದ್ಧಿಗೆ ನಯಾ ಪೈಸೆಯೂ ಬಿಡುಗಡೆ ಮಾಡದ ಕಾಂಗ್ರೆಸ್ ಸರ್ಕಾರ, ರೈತರಿಗೆ ಬರ ಪರಿಹಾರ ಕೊಡಲೂ ಸಹ ಹಣವಿಲ್ಲದಷ್ಟು ದಿವಾಳಿಯಾಗಿದೆ. ರಾಜ್ಯದ ಈ ದುಃಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ನೀತಿಗಳು, ದುರಾಡಳಿತ ಕಾರಣವೇ ಹೊರತು ಕೇಂದ್ರ ಸರ್ಕಾರವಲ್ಲ.
''14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರುವ ತೆರಿಗೆ ಹಂಚಿಕೆ ಕಡಿಮೆ ಆಗಿದೆ ಅಂತ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. 15ನೇ ಹಣಕಾಸು ಆಯೋಗದ ಸಮಿತಿ ತನ್ನ ತೆರಿಗೆ ಹಂಚಿಕೆ ಸೂತ್ರ ರೂಪಿಸುವಾಗ 2018ರಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಅವರದೇ ಸರ್ಕಾರ ಇತ್ತು ಎಂಬುದನ್ನು ಮರೆತಂತಿದೆ'' ಎಂದು ಕಿಡಿಕಾರಿದ್ದಾರೆ.
ಬೇಜವಾಬ್ದಾರಿಯೇ ನೇರ ಕಾರಣ- ಅಶೋಕ್:''ಸಿಎಂ ಸಿದ್ದರಾಮಯ್ಯನವರಿಗೆ ನಿಜವಾಗಿಯೂ ರಾಜ್ಯದ ಬಗ್ಗೆ ಕಾಳಜಿ ಇದಿದ್ದರೆ, ರಾಜ್ಯಕ್ಕೆ ಉಂಟಾಗಬಹುದಾದ ನಷ್ಟದ ಬಗ್ಗೆ 2018ರಲ್ಲೇ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಿ ಮನವರಿಕೆ ಮಾಡಿಕೊಡಬಹದಿತ್ತು. ರಾಜ್ಯಕ್ಕೆ ನ್ಯಾಯ ಒದಗಿಸಬಹುದಿತ್ತು. ಆದರೆ, ಆಗ ಸುಮ್ಮನಿದ್ದ ಸಿದ್ದರಾಮಯ್ಯ ಈಗ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಹಂಚಿಕೆ ಪಾಲು ಕಡಿಮೆಯಾಗಲು ಸಿದ್ದರಾಮಯ್ಯ ಅವರ ಬೇಜವಾಬ್ದಾರಿಯೇ ನೇರ ಕಾರಣವೇ ಹೊರತು ಬೇರೆ ಯಾರೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಹೋರಾಟ:ಕರ್ನಾಟಕ ರಾಜ್ಯದ ಪಾಲಿನ ನ್ಯಾಯಯುತ ಅನುದಾನ ಬಿಡುಗಡೆಗೆ ಆಗ್ರಹಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಫೆ.7 ರಂದು ದೆಹಲಿಯ ಜಂತರ್ ಮಂಥರ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಸಂಸದ ಡಿ.ಕೆ. ಸುರೇಶ್ ಜೊತೆಗೆ ನಿನ್ನೆ (ಸೋಮವಾರ) ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಇದನ್ನೂ ಓದಿ:'ಮೋದಿ, ಮನಮೋಹನ್ ಸಿಂಗ್ ಅವಧಿಯ ತೆರಿಗೆ ಹಣ ಬಿಡುಗಡೆ ಕುರಿತು ಶ್ವೇತಪತ್ರ ಹೊರಡಿಸಲಿ'