ಕರ್ನಾಟಕ

karnataka

By ETV Bharat Karnataka Team

Published : Mar 8, 2024, 5:37 PM IST

ETV Bharat / state

ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಖರ್ಗೆ ಸ್ಪರ್ಧೆ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ

ಶೀಘ್ರವೇ ಹೈಕಮಾಂಡ್​ನಿಂದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

DCM DK Sivakumar  Congress candidates list
ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ

ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ

ನವದೆಹಲಿ/ಬೆಂಗಳೂರು: ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ. ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದು ಮಾಧ್ಯಮಗಳಿಗೆ ಡಿಸಿಎಂ ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಚಿವ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ಯಾವ ತಪ್ಪಿಲ್ಲ ಎಂದು ತಿಳಿಸಿದರು.

ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸ ಕೂಡಾ ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಿವಕುಮಾರ್​​​ ತಿಳಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (82) ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಜಾಧವ್​ ವಿರುದ್ಧ ಸೋಲು ಅನುಭವಿಸಿದ್ದರು. ಇದು ಅವರ ರಾಜಕೀಯ ಜೀವನದ ಐದು ದಶಕಗಳಲ್ಲಿ ಮೊಟ್ಟ ಮೊದಲ ಚುನಾವಣಾ ಸೋಲಾಗಿತ್ತು. ಈ ಸೋಲಿನ ನಂತರ, ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿ ಕೊಡಲಾಗಿತ್ತು. ಗುಲಾಂ ನಬಿ ಆಜಾದ್​ ಅವರಿಂದ ತೆರವಾದ ರಾಜ್ಯಸಭಾ ವಿರೋಧ ಪಕ್ಷದ ಸ್ಥಾನಕ್ಕೆ ಬಳಿಕ ಅವರನ್ನು ನೇಮಕ ಮಾಡಲಾಗಿತ್ತು. ಇನ್ನು ಬದಲಾದ ಕಾಲಘಟ್ಟದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿ, ಅದರ ಅಧ್ಯಕ್ಷರಾದರು. 2009 ಮತ್ತು 2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ, ಕೇಂದ್ರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿದೆಯೇ ಎಂಬುದರ ಬಗ್ಗೆ ಮಾತನಾಡಿದ ಡಿಸಿಎಂ, ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿದೆ. ಸಿಎಂ ಪುತ್ರ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ ಆ ಬಗ್ಗೆ ಚರ್ಚೆ ಆಗಿಲ್ಲ ಎಂದು ತಿಳಿಸಿದರು.

ಓದಿ:'ನಾನು, ಸ್ನೇಹಿತ ಮುನಿರತ್ನ ಸಿದ್ಧಾಂತ ಒಪ್ಪಿ ಬಿಜೆಪಿಗೆ ಬಂದವರು, ಪಕ್ಷ ಬಿಡಲ್ಲ'

ABOUT THE AUTHOR

...view details