ಬೆಂಗಳೂರು : ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ, ಉಡುಪಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಹೈಕಮಾಂಡ್ ಜೊತೆ ಚರ್ಚಿಸಿ, ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ನೀಡುವ ನಿರ್ಣಯವನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ, ಮುಂಬರುವ ಉಪಚುನಾವಣೆಗಳ ಸಂಬಂಧ ವಿಸ್ತೃತ ಸಭೆ ಮಾಡಲಾಗಿದೆ. ಚನ್ನಪಟ್ಟಣ, ಸಂಡೂರು, ಹಾವೇರಿ ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. ಗೆಲ್ಲುವ ವಿಚಾರವಾಗಿ, ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
ಎಂಎಲ್ಸಿ ಸಿ ಟಿ ರವಿ (ETV Bharat) ಮೈತ್ರಿ ಪಕ್ಷದ ಜೊತೆ ಚರ್ಚೆ ಮಾಡಿ ಬಳಿಕ ಕೇಂದ್ರೀಯ ಮಂಡಳಿಯಲ್ಲಿ ಚರ್ಚೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತಿದೆ. ಅಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಕೇಂದ್ರೀಯ ಸಮಿತಿ ಜೊತೆ ಚರ್ಚಿಸಿ, ನಿರ್ಣಯ ಕೈಗೊಳ್ಳಲು ರಾಜ್ಯಾಧ್ಯಕ್ಷರಿಗೆ ಅನುಮತಿ ನೀಡಿದ್ದೇವೆ ಎಂದು ಹೇಳಿದರು.
ಇದರ ಜೊತೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಭ್ರಷ್ಟಾಚಾರ, ಗಣೇಶ ಚತುರ್ಥಿ, ಗಣೇಶ ನಿಮಜ್ಜನ, ಓಲೈಕೆ ರಾಜಕಾರಣ ಬಗ್ಗೆ ಚರ್ಚೆಯಾಗಿದೆ. ಸಂಘದ ಇತರೆ ಸಂಘಟನೆಗಳ ಜೊತೆ ಚರ್ಚಿಸಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ರಾಜಕೀಯವಾಗಿಯೇ ಸಂಚು ರೂಪಿಸಿದ್ದಾರೆ: ಮುನಿರತ್ನ ನಮ್ಮ ಶಾಸಕರು. ಅವರ ಮೇಲೆ ಎಸ್ಐಟಿ ರಚನೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಬಂದಾಗ ಅವರಿಂದ ಯಾವುದೇ ಕ್ರಮ ಆಗಿಲ್ಲ. ರಾಜಕೀಯ ಸಂಚು ಮಾಡೋದು ಬೇರೆ. ಆದರೆ ಇಲ್ಲಿ ರಾಜಕೀಯವಾಗಿಯೇ ಸಂಚು ರೂಪಿಸಿದ್ದಾರೆ. ಈ ಸರ್ಕಾರ ದ್ವೇಷ ಹಾಗೂ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದರು.
ರೀಡೂ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಕ್ಕೆ ನೀವು ಕೆಂಪಣ್ಣ ಆಯೋಗ ರಚನೆ ಮಾಡಿದ್ದು, ನ್ಯಾಯಾಲಯಕ್ಕೆ ಹೋದ ಆರು ಗ್ರಾಮಕ್ಕೆ ಮಾತ್ರ ಆದೇಶ ಇತ್ತು. ಮನವಿ ಸಲ್ಲಿಸದಿದ್ರೂ ನೀವು ಆದೇಶ ಮಾಡಿದ್ದೀರಿ. ಕೆಂಪಾಪುರ, ಶ್ರೀರಾಂಪುರ, ಚಳ್ಳಕೆರೆ ಸೇರಿ ಆರು ಗ್ರಾಮಗಳ ನಿವೇಶನದಾರರಿಗೆ ಹಂಚಿಕೆ ಮಾಡಿ, ಡಿ ನೋಟಿಫಿಕೇಷನ್ ಮಾಡಿದ್ದೀರಿ. ಹಣ ಕಟ್ಟಿಸಿಕೊಂಡು ಲೀಸ್ ಕಮ್ ಸೇಲ್ ಡೀಡ್ ನೀಡಿದ್ದೀರಿ ಎಂದು ಹೇಳಿದರು.
ನೀವು ಪರಮಭ್ರಷ್ಟರು ಅನ್ನೋದ್ರಲ್ಲಿ ಇನ್ನೊಂದು ಮಾತಿಲ್ಲ: ಅವರು ಹಣ ಕೊಟ್ಟಿದ್ದು ಅರ್ಕಾವತಿ ಬಡಾವಣೆಗೆ. ಅವರಿಗೆ ಸೇಲ್ ಡೀಡ್‌ನಲ್ಲಿ ಮೋಸ ಮಾಡಿದ್ದೀರಿ. ದುಡ್ಡು ಪಡೆದು ಡಿ ನೋಟಿಫಿಕೇಷನ್ ಮಾಡಿದ್ದೀರಿ. ಸುಪ್ರೀಂ ಕೋರ್ಟ್ ಸ್ಮಶಾನ, ಅಂಗನವಾಡಿ, ಶಾಲೆ ಇವೆಲ್ಲಾ ಹೊರತುಪಡಿಸಿ ಅಂತ ಹೇಳಿತ್ತು. ಆದರೆ ನಿಯಮ ಉಲ್ಲಂಘಿಸಲಾಗಿದೆ. ಕೆಂಪಣ್ಣ ಆಯೋಗದ ವರದಿ ಯಾಕೆ ಟೇಬಲ್ ಮಾಡಿಲ್ಲ? ಇಲ್ಲಿ ಚಹರೆ ಮೂಡಿದೆ, ಅದು ನಿಮಗೆ ಹೋಲುತ್ತಿದೆ. ಕೆಂಪಣ್ಣ ಆಯೋಗದ ವರದಿ ಮಂಡಿಸಿ. ವರದಿ ಆಧಾರದ ಮೇಲೆ ಕ್ರಮಕೈಗೊಳ್ಳಿ. ಇಲ್ಲದಿದ್ರೆ ನೀವು ಪರಮಭ್ರಷ್ಟರು ಅನ್ನೋದ್ರಲ್ಲಿ ಇನ್ನೊಂದು ಮಾತಿಲ್ಲ ಎಂದು ಹೇಳಿದರು.
ಒಂದು ಬಾರಿ ಬಿಡಿಎ ಸೈಟನ್ನ ಮಾರಾಟ ಮಾಡಿದ ಮೇಲೆ ಅದರ ಮಾಲೀಕತ್ವ ಸೈಟು ಪಡೆದವರಿಗೆ ಬರುತ್ತದೆ. ಆದರೆ ಸೈಟು ಹಂಚಿಕೆ ಆದ ಮೇಲೂ, ಡಿ ನೋಟಿಫಿಕೇಷನ್ ಮಾಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಅಧ್ಯಯನ ಮಾಡಬೇಕಾದರೆ, ಬಿಡಿಎ ಬಗ್ಗೆ ಅಧ್ಯಯನ ಮಾಡಿದರೆ ಸಾಕು ಎಂದು ವ್ಯಂಗ್ಯವಾಡಿದರು.
ಪ್ರಾಮಾಣಿಕವಾಗಿ ತನಿಖೆ ಮಾಡಲಿ :ರಾಜ್ಯಪಾಲರು ಸರ್ಕಾರವನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಅನ್ನೋ ಕಾಂಗ್ರೆಸ್ ನಾಯಕರ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ, ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆ. ತನಿಖೆ ಮಾಡಿ, ವರದಿ ಕೊಡಿ ಅನ್ನೋದು ತಪ್ಪಾ? ಟಾರ್ಗೆಟ್ಟಾ? ಹಗರಣಗಳ ತನಿಖೆ ನಡೆಸೋ ಬಗ್ಗೆ ನಾವ್ಯಾರು ಬೇಡ ಅಂದಿಲ್ಲ. ಚಂದ್ರಶೇಖರ್ ಡೆತ್ ನೋಟಲ್ಲಿ, ನೇರವಾಗಿ ನಾಗೇಂದ್ರ ಅಂತ ಹೆಸರು ಹೇಳಿದ್ದಾರೆ. ಇವರು ಎಸ್ಐಟಿಗೆ ಕೊಟ್ಟು ಕ್ಲೀನ್ ಚಿಟ್ ಪಡೆದಿದ್ದಾರೆ. ಇವರು ಪ್ರಾಮಾಣಿಕವಾಗಿ ತನಿಖೆ ಮಾಡಲಿ ಎಂದು ಹೇಳಿದರು.
ಮಾತೆತ್ತಿದ್ರೆ ಕಮ್ಯುನಲ್ ಕ್ಲಾಶ್ ಅಂತಾರೆ. ಅರ್ಕಾವತಿ ವರದಿ ಬಹಿರಂಗ ಮಾಡಿದ್ರೆ ಯಾವುದೇ ಕಮ್ಯುನಲ್ ಕ್ಲಾಶ್ ಆಗಲ್ಲ. ಕೆಲವರ ಮುಖವಾಡ ಕಳಚಿಬೀಳುತ್ತೆ ಅಷ್ಟೇ ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.
ಅಂಗನವಾಡಿ ಶಿಕ್ಷಕರ ನೇಮಕಕ್ಕೆ ಉರ್ದು ಕಡ್ಡಾಯ ವಿಚಾರ ಸಂಬಂಧ ಸರ್ಕಾರದ ವಿರುದ್ಧ ಸಿ. ಟಿ ರವಿ ಕೆಂಡಾಮಂಡಲರಾದರು. ಬಹುಶಃ ಟಿಪ್ಪು ಸುಲ್ತಾನ್‌ಗೆ ಖುಷಿ ಆಗಿರಬಹುದು. ಪರ್ಶಿಯನ್ ಭಾಷೆ ಹೇರಿಕೆ ಮಾಡಿ ಕಡ್ಡಾಯಗೊಳಿಸಲು ಟಿಪ್ಪು ಹೊರಟಿದ್ದ. ಕನ್ನಡ ಆಡಳಿತ ಭಾಷೆ ಅಂತ ಹೇಳೋದು. ಉರ್ದು ಇವರ ತಾತನ ಮನೆಯ ಭಾಷೆಯಾ? ಇವರ ಅಪ್ಪ, ಅಜ್ಜ ಮತ್ತು ಅವರದ್ದು ಡಿಎನ್ಎ ಒಂದೇನಾ? ನಾನು ಮಾಡದ ಕೆಲಸ, ಇವರು ಮಾಡ್ತಿದ್ದಾರೆ ಅಂತ ನಿಜಾಮನಿಗೆ, ಟಿಪ್ಪುಗೆ ಅನಿಸಿರಬಹುದು ಎಂದು ಟೀಕಿಸಿದರು.
ಇದನ್ನೂ ಓದಿ :ನ್ಯಾ. ಕೆಂಪಣ್ಣ ಆಯೋಗದ ವರದಿ ಬಹಿರಂಗಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಿ : ರಾಜ್ಯಪಾಲರಿಗೆ ಪತ್ರ ಬರೆದ ಸಿ ಟಿ ರವಿ - C T Ravi wrote letter to governer