ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 212(1)ಕ್ಕೆ ನಿಯಮಾವಳಿ ಸಮಿತಿಯ ಮಧ್ಯಂತರ ವರದಿಯಲ್ಲಿ ಮಾಡಿದ್ದ ತಿದ್ದುಪಡಿ ಶಿಫಾರಸನು ವಿಧಾನಸಭೆ ಅಂಗೀಕರಿಸಿತು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ತಿದ್ದುಪಡಿ ನಿಯಮವನ್ನು ಮಂಡಿಸಿ ನಿಯಮಾವಳಿ ಸಮಿತಿ ಸಭೆ ಸೇರಲು ಕೋರಂ ಸಮಸ್ಯೆಯಾಗುತ್ತದೆ. ಆ ಸಮಸ್ಯೆ ಪರಿಹಾರಕ್ಕಾಗಿ ಈ ತಿದ್ದುಪಡಿ ತರಲಾಗಿದೆ. ಎಲ್ಲಾ ಸ್ಥಾಯಿ ಸಮಿತಿಗಳಿಗೂ ಅನ್ವಯವಾಗಲಿದ್ದು, ಸಭೆ ನಡೆಸಲು ಅನುಕೂಲವಾಗಲಿದೆ ಎಂದರು.
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮಾತನಾಡಿ, ಸ್ಥಾಯಿ ಸಮಿತಿಗಳ ಸಭೆಗೆ ಅಧಿಕಾರಿಗಳು ಬಂದಿರುತ್ತಾರೆ. ಸದಸ್ಯರು ಸರಿಯಾಗಿ ಬರುವುದಿಲ್ಲ. ಬರುವಂತೆ ಮಾಡಬೇಕು ಎಂದು ಹೇಳಿದರು. ಸ್ಪೀಕರ್ ಯು.ಟಿ.ಖಾದರ್, ನೀವು ನೀಡಿದ ಸಲಹೆ ಉತ್ತಮವಾಗಿದ್ದು, ಆಲೋಚನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.