ಕೂಡಲ ಸಂಗಮ ಸ್ವಾಮೀಜಿ ಬಸವ ಜಯಮೃತ್ಯುಂಜಯ ಶ್ರೀ ಹೇಳಿಕೆ (ETV Bharat) ಧಾರವಾಡ: "ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಡಿಕೆ ವಿಚಾರಕ್ಕೆ ಕಾನೂನಾತ್ಮಕ ಬೆಂಬಲ ಪಡೆಯಲು ವಕೀಲರ ಸಂಘಟನೆ ಮಾಡಿ ಎಲ್ಲ ಕಡೆ ನೂತನ ಜಿಲ್ಲಾ ಘಟಕಗಳನ್ನು ಮಾಡುತ್ತಿದ್ದೇವೆ. ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಲಾಗಿದೆ" ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಪಂಚಮಸಾಲಿ ಸಮಾಜದ ವಕೀಲರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, "ಮೂರೂವರೆ ವರ್ಷದಿಂದ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದೆ. ಸಿದ್ದರಾಮಯ್ಯ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ. 7ನೇ ಹಂತದ ಹೋರಾಟ ಆರಂಭಿಸಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸಮಾಜದ ಶಾಸಕರು ಮಾತನಾಡಿಲ್ಲ. ನಾವು ಇದಕ್ಕಾಗಿಯೇ ಶಾಸಕರಿಗೆ ಪತ್ರ ಕೊಟ್ಟು ಚಳವಳಿ ಮಾಡಿದೆವು. ಶಾಸಕಾಂಗ ಸಹ ನಮ್ಮ ಮೀಸಲಾತಿಗಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ವಕೀಲರ ಸಂಘಟನೆ ಮಾಡುತ್ತಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಮುಂದುವರೆದು "22ಕ್ಕೆ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ ಸಮಾವೇಶ ಮಾಡಲಿದ್ದೇವೆ. ಬೆಳಗಾವಿಯಲ್ಲಿ ಈ ಸಮಾವೇಶ ನಡೆಯಲಿದೆ. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ವಕೀಲರು ಪಾಲ್ಗೊಳ್ಳುತ್ತಿದ್ದಾರೆ. ಐದು ಸಾವಿರದಷ್ಟು ವಕೀಲರು ಸೇರಲಿದ್ದಾರೆ. ಅವತ್ತು ಕೆಲವು ಕಠಿಣವಾದ ನಿರ್ಣಯಗಳನ್ನು ಅಂಗೀಕರಿಸಲಿದ್ದೇವೆ. ಅವತ್ತಿನ ಸಭೆಯಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ವಕೀಲರ ಮೂಲಕ ಮಾಡುತ್ತೇವೆ. ಸ್ಪೀಕರ್ ನಮ್ಮ ಸಮಾಜದ ಶಾಸಕರಿಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಆದರೂ ನಮ್ಮ ಶಾಸಕರು ಅವರಾಗಿಯೇ ಧ್ವನಿ ಎತ್ತಿಲ್ಲ. ನಮ್ಮ ಸಮಾಜದ ಶಾಸಕರಿಗೂ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ" ಎಂದು ಹರಿಹಾಯ್ದರು.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತರ ಕೊಡುಗೆ ಇದೆ: ಜಯಮೃತ್ಯುಂಜಯ ಸ್ವಾಮೀಜಿ - 2A Reservation