ಬೆಳ್ತಂಗಡಿ:ತಾಲೂಕಿನ ಕಲ್ಮಂಜ ಗ್ರಾಮದ ಇತಿಹಾಸ ಪ್ರಸಿದ್ಧ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂಭಾಗದ ಪುರಾತನ ಅಶ್ವತ್ಥ ವೃಕ್ಷ ಭಾನುವಾರ ಸುರಿದ ಭಾರೀ ಮಳೆಗೆ ಧರೆಗಪ್ಪಳಿಸಿದೆ.
ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳ ಸಂಗಮ ಸ್ಥಳದಲ್ಲಿ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇವಸ್ಥಾನ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪವಿತ್ರ ಶಿವನ ಸಾನಿಧ್ಯವಾಗಿ ಪ್ರಸಿದ್ಧಿ ಪಡೆದಿದೆ.
ದೇವಸ್ಥಾನ ನೇತ್ರಾವತಿ ನದಿ ದಡದಲ್ಲಿದೆ. ಆಟಿ ಅಮಾವಾಸ್ಯೆಯಂದು ತೀರ್ಥಸ್ನಾನಕ್ಕೆ ಇದು ಅತ್ಯಂತ ಸೂಕ್ತ ಸ್ಥಳವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ.
ದೇವಳದ ಮುಂಭಾಗದಲ್ಲಿ ಹರಿಯುವ ನದಿ ದಡದಲ್ಲಿ ಪುರಾತನ ಅಶ್ವತ್ಥ ವೃಕ್ಷವಿದ್ದು, ಪ್ರಕೃತಿ ಪೂಜಕರಾದ ಹಿಂದೂಗಳಿಗೆ ಅತ್ಯಂತ ಶ್ರದ್ಧೆಯ ಕೇಂದ್ರವಾಗಿತ್ತು. ದೇವಳಕ್ಕೆ ಬರುವ ಭಕ್ತರು ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ತೆರಳುತ್ತಿದ್ದರು.
ಆದರೆ ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಮಣ್ಣು ಸಡಿಲಗೊಂಡು ಬೃಹದಾಕಾರವಾಗಿ ಬೆಳೆದು ನಿಂತಿದ್ದ ವೃಕ್ಷ ಬುಡಸಮೇತ ಕಿತ್ತುಬಂದು ಧರಾಶಾಹಿಯಾಗಿದೆ.
ಉಡುಪಿಯಲ್ಲೂ ನಿರಂತರ ಮಳೆ:ಉಡುಪಿಯಲ್ಲೂ ಸತತ ಮಳೆಯಾಗುತ್ತಿದೆ. ಜು.6 ಮತ್ತು 7ರ ನಡುವೆ ಸರಾಸರಿ 93.4 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 117.7, ಹೆಬ್ರಿಯಲ್ಲಿ 107.7, ಬೈಂದೂರಿನಲ್ಲಿ 97.7, ಬ್ರಹ್ಮಾವರದಲ್ಲಿ 97.0, ಕಾರ್ಕಳದಲ್ಲಿ 87.7, ಕುಂದಾಪುರದಲ್ಲಿ 82.6 ಹಾಗೂ ಕಾಪುವಿನಲ್ಲಿ 77.4 ಮಿ.ಮೀ. ಮಳೆ ಬಿದ್ದಿದೆ. ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿದ್ದು ಪ್ರವಾಸಿಗರು ಕಡಲ ತೀರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ಉತ್ತರಕನ್ನಡಲ್ಲಿ ವರುಣಾರ್ಭಟ: ಕರಾವಳಿ ತಾಲೂಕುಗಳ ಶಾಲೆಗಳಿಗೆ ಸೋಮವಾರವೂ ರಜೆ - Rain In Uttara Kannada