ಬೆಂಗಳೂರು: "ನಾನು ಇಂದು ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದು ಬಂದಿದ್ದರೆ ಅದಕ್ಕೆ ಶಿಕ್ಷಣ ಸಿಕ್ಕಿದ್ದೇ ಕಾರಣ. ಶಿಕ್ಷಣದ ಪಾತ್ರ ಬಹಳ ಮಹತ್ವದ್ದು. ಬರೀ ಪಠ್ಯಪುಸ್ತಕದಲ್ಲಿನ ಪಾಠ ಹೇಳಿಕೊಡುವುದಲ್ಲ. ಇಡೀ ಬದುಕಿನ ಪಾಠ ಹೇಳಿಕೊಡುವ ಶಿಕ್ಷಕರಾಗಬೇಕು. ಆಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ. ಶಿಕ್ಷಕ ವೃತ್ತಿ ಕೇವಲ ವೃತ್ತಿಯಲ್ಲ, ಸಾಮಾಜಿಕ ಜವಾಬ್ದಾರಿ. ಶಿಕ್ಷಕರು ಮೌಢ್ಯ, ಕಂದಾಚಾರ ಬಿತ್ತದೇ, ವೈಜ್ಞಾನಿಕ, ವೈಚಾರಿಕತೆ ಬೆಳೆಸಬೇಕು" ಎಂದು ಶಿಕ್ಷಕ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ ನಿಮಿತ್ತ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, "ರಾಧಾಕೃಷ್ಣನ್ ಅವರಂತೆ ಉತ್ತಮ ಶಿಕ್ಷಕರಾಗಲು ಎಲ್ಲರೂ ಪ್ರಯತ್ನಿಸಬೇಕು. ಅವರಿಗೆ ಉತ್ತಮ ಶಿಕ್ಷಕರಾಗಲು ಸಾಧ್ಯವಾಗಿದೆಯಾದರೆ ಇತರರಿಗೆ ಯಾಕೆ ಸಾಧ್ಯವಿಲ್ಲ? ರೈತರು ಇಡೀ ದೇಶಕ್ಕೆ ಆಹಾರ ತಯಾರಕರು, ಶಿಕ್ಷಕರು ಇಡೀ ದೇಶದ ಭವಿಷ್ಯ ರೂಪಿಸುವವರು. ಉತ್ತಮ ಶಿಕ್ಷಣ ನೀಡಿದರೆ ದೇಶದ ಅಭಿವೃದ್ಧಿಯಾಗಲಿದೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡಾಗ ದೇಶದ ಭವಿಷ್ಯ ನಿರ್ಮಾಣಕ್ಕೆ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಎಲ್ಲ ಶಿಕ್ಷಕರು ಭಾವಿಸಬೇಕು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಉಪಾಧ್ಯಾಯರ ನಡೆ ನುಡಿ ಯಾವ ರೀತಿ ಇರುತ್ತವೆಯೋ ಅದೇ ನಡೆ ನುಡಿಯನ್ನು ವಿದ್ಯಾರ್ಥಿಗಳು ಪಾಲನೆ ಮಾಡುತ್ತಾರೆ. ಹಾಗಾಗಿ ಎಚ್ಚರಿಕೆ ಅಗತ್ಯ" ಎಂದರು.
ವಿದ್ಯಾರ್ಥಿಗಳನ್ನು ಸ್ವತಂತ್ರ ಚಿಂತನೆಗೆ ಹಚ್ಚಿ:"ಶಿಕ್ಷಕ ವೃತ್ತಿ ವಿದ್ಯಾರ್ಥಿಗಳನ್ನು ಸ್ವತಂತ್ರವಾಗಿ ಚಿಂತನೆ ಮಾಡುವ ರೀತಿ ತಯಾರು ಮಾಡುವಂತಿರಬೇಕು. ನಾವು ವಿದ್ಯೆ ಕಲಿತಿದ್ದೇವೆ ಎಂದರೆ ನಮ್ಮ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂಧಿಸುವಂತಿರಬೇಕು. ವಿದ್ಯಾರ್ಥಿಗಳಾದವರು ಜಾತ್ಯತೀತರಾಗಿರಬೇಕೇ ಹೊರತು, ಜಾತಿ ವ್ಯವಸ್ಥೆಯಲ್ಲಿ ರಾಜಿಮಾಡಿಕೊಳ್ಳುವುದಲ್ಲ. ವೈಜ್ಞಾನಿಕತೆ ಮತ್ತು ವೈಚಾರಿಕತೆ ಬಳೆಸಿಕೊಳ್ಳಬೇಕು. ಸಮಾಜವನ್ನು ಅರ್ಥ ಮಾಡಿಕೊಂಡು ವೈಚಾರಿಕತೆ ಜೀವನ ಪಾಲನೆ ಮಾಡುವ ರೀತಿ ವಿದ್ಯಾರ್ಥಿಗಳನ್ನು ಬೆಳೆಸುವ ಜವಾಬ್ದಾರಿ ಎಲ್ಲಾ ಶಿಕ್ಷಕರದ್ದಾಗಿದೆ. ಹಿಂದೆ ಗುರು ಮುಂದೆ ಗುರಿ ಇರಬೇಕು ಎಂದು ಕುವೆಂಪು ಹೇಳಿದ್ದರು. ಆದರೆ, ಇಂದು ಹಿಂದೆ ಗುರು ಇಲ್ಲ, ಮುಂದೆ ಗುರಿಯೂ ಇಲ್ಲ ಎನ್ನುವಂತಾಗಿದೆ. ಸಂವಿಧಾನ ಎಲ್ಲರಿಗೂ ಕಡ್ಡಾಯ ಶಿಕ್ಷಣ ಹಕ್ಕು ಕೊಟ್ಟಿದೆ. ಶಿಕ್ಷಣ ಕೇವಲ ಹಕ್ಕಾಗಿರದೆ ವ್ಯಕ್ತಿತ್ವ ರೂಪಿಸುವ ಶಿಕ್ಷಣವಾಗಬೇಕು. ಅದಕ್ಕೆ ಶಿಕ್ಷಕರು ರುವಾರಿಗಳು" ಎಂದು ಹೇಳಿದರು.