ಮೈಸೂರು:ಫೆಬ್ರವರಿ 6 ರಿಂದ 11ರ ವರೆಗೆ 6 ದಿನಗಳ ಕಾಲ ನಡೆಯಲಿರುವ ಶಿವರಾತ್ರಿಶ್ವರ ಶಿವಯೋಗಿಯವರ ಜಾತ್ರಾ ಮಹೋತ್ಸದ ಅಂಗವಾಗಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ನಂತರ ಅನ್ನ ದಾಸೋಹಕ್ಕೆ ಇಂದು (ಸೋಮವಾರ) ಚಾಲನೆ ನೀಡಿದರು.
ನಾಳೆಯಿಂದ (ಮಂಗಳವಾರ) 6 ದಿನಗಳ ಕಾಲ ನಿರಂತರವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಪ್ರಸಿದ್ಧ ಸುತ್ತೂರು ಶಿವರಾತ್ರಿ ಶಿವಯೋಗಿಯವರ ಜಾತ್ರಾ ಮಹೋತ್ಸವ ಫೆಬ್ರವರಿ 6ರಿಂದ 11ರ ವರೆಗೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಈ ಜಾತ್ರೆ ಕೇವಲ ಭಕ್ತಿಗಷ್ಟೇ ಸಿಮಿತವಾಗದೆ, ರೈತರಿಗೆ ಮಾಹಿತಿ ನೀಡುವ ಹಲವಾರು ಹೊಸ ಕೃಷಿ ಸಂಶೋಧನೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಪ್ರಸಿದ್ಧವಾಗಿದೆ. ಜಾತ್ರಾ ಮಹೋತ್ಸಕ್ಕೆ ಭಕ್ತರು, ಸೇವಾರ್ಥದಾರರು, ಸಂಘ ಸಂಸ್ಥೆಗಳು, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಸುತ್ತೂರು ಜಾತ್ರೆಯ 6 ದಿನಗಳವರೆಗಿನ ಪ್ರಮುಖ ಕಾರ್ಯಕ್ರಮಗಳು:ಫೆಬ್ರವರಿ 6 ರಂದು ಸುತ್ತೂರು ಜಾತ್ರೆಗೆ ಅಧಿಕೃತ ಚಾಲನೆ ಸಿಗಲಿದ್ದು, ಅಂದು ವೀರಭದ್ರೇಶ್ವರ ಕೊಂಡೋತ್ಸವ ನಡೆಯಲಿದೆ. ಫೆಬ್ರವರಿ 7 ರಂದು ಸಾಮೂಹಿಕ ವಿವಾಹ ಹಾಗೂ ಹಾಲರವಿ ಉತ್ಸವ ನೆರವೇರಲಿದೆ. ಫೆಬ್ರವರಿ 8 ರಂದು ರಥೋತ್ಸವ, ಫೆಬ್ರವರಿ 9 ರಂದು ಕೊಂಡೋತ್ಸವ ಮತ್ತು ಲಕ್ಷ ದೀಪೋತ್ಸವ ಜರುಗಲಿದೆ. ಈ ಬಾರಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಮೇಳದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 10 ರಂದು ಪಾರ್ವತಿ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿ ಗೃಹ ಉದ್ಘಾಟನೆ ಹಾಗೂ ತೆಪ್ಪೋತ್ದವ ನೆರವೇರಲಿದೆ. ಸುತ್ತೂರು ಜಾತ್ರಾ ಮಹೋತ್ಸವದ ಕೊನೆ ದಿನ ಫೆಬ್ರವರಿ 11 ರಂದು ಅನ್ನ ಬ್ರಹ್ಮೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಟದ ಕಾರ್ಯದರ್ಶಿ ಎಸ್.ಮಂಜುನಾಥ್ ಮಾಹಿತಿ ನೀಡಿದರು.