ಬೆಂಗಳೂರು:ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಪಾರ್ಟ್ಮೆಂಟ್ ಫೆಡರೇಷನ್ ಮತ್ತು ಕ್ರೆಡೈ ಜೊತೆಗೆ ಸಹಭಾಗಿತ್ವಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ. ಏಪ್ರಿಲ್ 2 ರಿಂದ ಸಂಸ್ಕರಿಸಿದ ನೀರಿನ ಸರಬರಾಜು ಪ್ರಾರಂಭಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಹಾಗೂ ಕ್ರೆಡೈ ಜೊತೆಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅಪಾರ್ಟ್ಮೆಂಟ್ಗಳ ಎಸ್ ಟಿ ಪಿಗಳಿಂದ ಶುದ್ಧೀಕರಣ ಗೊಳಿಸಲಾಗಿರುವ ಶೇ 50 ರಷ್ಟು ನೀರನ್ನು ಮಾರಾಟ ಮಾಡಲು ಮಾರ್ಚ್ 11 ರಂದು ಅನುಮತಿ ನೀಡಲಾಗಿದೆ. ಹಾಗೆ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲೂ ಸಂಸ್ಕರಿಸಿದ ನೀರು ಲಭ್ಯವಿದೆ. ಈ ನೀರನ್ನು ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಉದ್ದೇಶದಿಂದ ಈ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ತ್ಯಾಜ್ಯ ನೀರು ಶುದ್ಧೀಕರಣ:ಖಾಸಗಿ ಅಪಾರ್ಟ್ಮೆಂಟ್ ಹಾಗೂ ಜಲಮಂಡಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಕಟ್ಟಡಗಳ ಬಳಕೆಗೆ ಪ್ರತ್ಯೇಕ ಪೈಪ್ ಲೈನ್ ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದರಿಂದಾಗಿ ಅವರ ಅಗತ್ಯತೆಗೆ ಅನುಗುಣವಾಗಿ ನಿರಂತರವಾಗಿ ನೀರು ಪೂರೈಕೆ ಸಾಧ್ಯವಾಗಲಿದೆ ಎಂದಿದ್ದಾರೆ.
ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಬಹುತೇಕ ಕೊಳವೆ ಬಾವಿಗಳು ಮತ್ತು ಟ್ಯಾಂಕರ್ಗಳನ್ನು ಅವಲಂಬಿಸಲಾಗುತ್ತದೆ. ಇದರಿಂದ ಅಂತರ್ಜಲದ ಮೇಲೆ ಬಹಳಷ್ಟು ಒತ್ತಡ ಹೆಚ್ಚಾಗಿದೆ. ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವುದರಿಂದ ಇದನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಪಾರ್ಟ್ಮೆಂಟ್ ಗಳ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ. ಇದೇ ರೀತಿ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ. ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ನಮ್ಮ ಉದ್ದೇಶವಾಗಿದೆ. ಅಪಾರ್ಟ್ಮೆಂಟ್ಗಳು ತಮ್ಮ ಹೆಚ್ಚುವರಿ ನೀರನ್ನು ಸುಲಭವಾಗಿ ಮಾರಾಟ ಮಾಡಲು ಗ್ರಾಹಕರನ್ನು ಒದಗಿಸುವ ವೇದಿಕೆ ಆಗಿ ಇದು ಕಾರ್ಯವಹಿಸಲಿದೆ ಇದರಿಂದ ಬಿಎಎಫ್ ಹಾಗೂ ಕಟ್ಟಡ ಮಾಲೀಕರಿಗೂ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.