ಗಂಗಾವತಿ(ಕೊಪ್ಪಳ):ಆನುವಂಶೀಯತೆ ಸೇರಿದಂತೆ ನಾನಾ ಕಾರಣಗಳಿಂದ ಉಂಟಾಗುವ ಜನನೇಂದ್ರಿಯ ಕ್ಯಾನ್ಸರ್ನಿಂದ ಬಳಲುತ್ತಿದ್ದ ವೃದ್ಧ ವ್ಯಕ್ತಿಗೆ ಇಲ್ಲಿನ ಮೂತ್ರ ರೋಗ ಹಾಗೂ ಮೂತ್ರ ಕ್ಯಾನ್ಸರ್ ತಜ್ಞ ನಾಗರಾಜ್ ಅವರ ನೇತೃತ್ವದ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಅಪರೂಪದ ಲ್ಯಾಪ್ರೊಸ್ಕೋಪಿ ರ್ಯಾಡಿಕಲ್ ಪ್ರಾಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವಿಜಯನಗರ ಜಿಲ್ಲೆಯ ಕಮಲಾಪುರದ ರಾಮಪ್ಪ(75) ಎಂಬವರು ಕಳೆದ ಹಲವು ವರ್ಷದಿಂದ ಮೂತ್ರಸೋಂಕಿನಿಂದ ಬಳಲುತ್ತಿದ್ದರು. ಪದೇ ಪದೇ ಮೂತ್ರ ವಿಸರ್ಜನೆಯ ಬಯಕೆ, ಮೂತ್ರ ವಿಸರ್ಜಿಸುವಾಗ ಶಿಶ್ನದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಮೂತ್ರನಾಳದಿಂದ ಬರುವ ಮೂತ್ರ ಸರಾಗವಾಗಿ ಹೋಗದೇ ಶಿಶ್ನದ ಮುಂಭಾಗ ಸ್ಥಗಿತವಾಗಿ ನೋವು ಉಂಟಾಗುತಿತ್ತು. ಹೀಗಾಗಿ ಚಿಕಿತ್ಸೆ ಪಡೆಯಲು ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಜನನೇಂದ್ರಿಯ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ರೋಗಿಯನ್ನು ಪರಿಶೀಲಿಸಿದ ವೈದ್ಯರ ತಂಡಕ್ಕೆ, ರೋಗಿಯ ಜನನೇಂದ್ರಿಯ (ಪ್ರಾಸ್ಟೇಟ್) ಗ್ರಂಥಿ ಊದಿಕೊಂಡಿರುವುದು ಕಂಡುಬಂದಿದೆ. ರಕ್ತ ಸೇರಿದಂತೆ ನಾನಾ ಪರೀಕ್ಷೆಗಳನ್ನು ಮಾಡಿಸಿದಾಗ ಪ್ರಾಸ್ಟೇಟ್ ಗ್ರಂಥಿಯಲ್ಲಿ ಅಸಹಜ ಸಿರಮ್ ಕಂಡುಬಂದಿದೆ. ಹೀಗಾಗಿ ರೋಗಿಯಿಂದ ಸಂದೇಹಿತ ಭಾಗದಲ್ಲಿನ ಬಯಾಪ್ಸಿ ಸ್ಯಾಂಪಲ್ ಸಂಗ್ರಹಿಸಿ ಹಿಸ್ಟೋಪೆಥಾಲಜಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆಗ ಜನನೇಂದ್ರಿಯದ ಕ್ಯಾನ್ಸರ್ ಇರುವುದು ಖಚಿತವಾಗಿದೆ.
ಪ್ರಾಸ್ಟೇಟ್ ಗ್ರಂಥಿಗೆ ಹರಡಿದ್ದ ಕ್ಯಾನ್ಸರ್ಗೆ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಲಭ್ಯವಾಗುತ್ತದೆ. ಅಲ್ಲಿಗೆ ಹೋಗುವಂತೆ ವೈದ್ಯರು ರೋಗಿಗೆ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ರೋಗಿ, ಇಲ್ಲಿಯೇ ಶಸ್ತ್ರಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ. ರೋಗಿಯ ವಯಸ್ಸು, ಆರೋಗ್ಯದ ಸ್ಥಿತಿಗತಿಗಳನ್ನು ಗಮನಿಸಿದ ವೈದ್ಯರು, ಶಸ್ತ್ರಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿ ಮಾಡಿದ್ದಾರೆ. ತಂಡದಲ್ಲಿ ಮೂತ್ರರೋಗ ಹಾಗೂ ಮೂತ್ರಕ್ಯಾನ್ಸರ್ ರೋಗ ತಜ್ಞ ವೈದ್ಯ ಡಾ.ನಾಗರಾಜ್ ನೇತೃತ್ವದಲ್ಲಿನ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ವೈದ್ಯರ ತಂಡದಲ್ಲಿ ಅರವಳಿಕೆ ತಜ್ಞೆ ಸವಿತಾ ಸಿಂಗನಾಳ, ಸಿಬ್ಬಂದಿ ಚೈತ್ರಾ, ಮುಸ್ಕಾನ್, ಮಹಾಂತೇಶ, ಮಲ್ಲೇಶ, ಶರಣೇಗೌಡ, ಮಹೆಬೂಬ, ಮಹೇಶ ಇದ್ದರು.
ವೈದ್ಯ ನಾಗರಾಜ್ ಮಾತನಾಡಿ, "ಇದನ್ನು ವೈದ್ಯಕೀಯ ಭಾಷೆಯಲ್ಲಿ ಲ್ಯಾಪ್ರೊಸ್ಕೋಪಿ ರ್ಯಾಡಿಕಲ್ ಪ್ರಾಸ್ಟೇಟೆಕ್ಟಮಿ ಮತ್ತು 'ಲ್ಯಾಪ್ರೊಸ್ಕೋಪಿ ಪೆಲ್ವಿಕ್ ಲಿಂಪ್ಲೋಡ್ ಡಿಸೆಕ್ಷನ್' ಎಂದು ಕರೆಯುತ್ತಾರೆ. ನಮ್ಮ ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದಲ್ಲಿ ಇಂತಹ ಶಸ್ತ್ರಚಿಕಿತ್ಸೆಗಳು ಬಹಳ ವಿರಳ.
ಈ ಶಸ್ತ್ರಚಿಕಿತ್ಸೆ ಬೆಂಗಳೂರು ಬಿಟ್ಟರೆ ನಮ್ಮ ಭಾಗದಲ್ಲಿ ಮಾಡಲ್ಲ. ಒಂದೊಮ್ಮೆ ಶಸ್ತ್ರಚಿಕಿತ್ಸೆ ಮಾಡಿದರೆ ಅದು ಕೇವಲ ಒಪೆನ್ ಸರ್ಜರಿ (ತೆರೆದ ಶಸ್ತ್ರಚಿಕಿತ್ಸೆ) ಮಾಡುತ್ತಾರೆ. ಲ್ಯಾಪ್ರೋಸ್ಕೋಪಿಕ್ (ಉದರ ದರ್ಶಕ) ಸರ್ಜರಿ ಮಾಡಲ್ಲ. ಈ ತರಹದ ಶಸ್ತ್ರಚಿಕಿತ್ಸೆ ನನ್ನ ಸೇವಾ ಅವಧಿಯಲ್ಲಿ ಎರಡನೇಯದ್ದು" ಎಂದು ತಿಳಿಸಿದರು.
ಲ್ಯಾಪ್ರೋಸ್ಕೋಪಿ ವಿಶೇಷತೆ ಏನು?:"ಲ್ಯಾಪ್ರೋಸ್ಕೋಪಿಕ್ (ಉದರ ದರ್ಶಕ) ಸರ್ಜರಿಯಲ್ಲಿ ರಕ್ತಸ್ರಾವ, ನೋವಿನ ಪ್ರಮಾಣ ಅತ್ಯಂತ ಕಡಿಮೆ. ಚಿಕಿತ್ಸೆಗೆ ಒಳಗಾಗುವ ವ್ಯಕ್ತಿ ಬಹುಬೇಗ ಚೇತರಿಸಿಕೊಂಡು ದೈನಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಆದರೆ ಒಪೆನ್ ಸರ್ಜರಿಯಲ್ಲಿ ಅಧಿಕ ರಕ್ತಸ್ರಾವ ಆಗುತ್ತದೆ. ವಿಪರೀತವಾದ ಮತ್ತು ಸಹಿಸಲಸಾಧ್ಯ ನೋವು ಇರುತ್ತದೆ. ಬೆಂಗಳೂರಿನಂತಹ ಮಹಾನಗರಕ್ಕೆ ಹೋದರೆ ಬಡ, ಮಧ್ಯಮ ವರ್ಗದ ರೋಗಿಗಳಿಗೆ ಖರ್ಚು ಅಧಿಕ. ಆದರೆ ಸ್ಥಳೀಯ ಗಂಗಾವತಿಯಂತಹ ಸಣ್ಣ ನಗರಗಳಲ್ಲಿ ಇಂತಹ ಚಿಕಿತ್ಸೆ ಸಿಕ್ಕರೆ ಅತ್ಯಲ್ಪ ವೆಚ್ಚದಲ್ಲಿ ಮಾಡಿ ಮುಗಿಸಬಹುದು" ಎಂದು ಅವರು ಹೇಳಿದರು.
ಇದನ್ನೂ ಓದಿ:ಮಹಿಳೆಯ ಗರ್ಭಕೋಶದ ಸುತ್ತ 4.5 ಕೆ.ಜಿ ಗಡ್ಡೆ: ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ