ಮೈಸೂರು:"ಸಾಂಸ್ಕೃತಿಕ ನಗರಿ ಪ್ರಸಿದ್ಧಿಯ ಮೈಸೂರಿನಲ್ಲಿ ನಮ್ಮ ಹಿರಿಯರು ಕಷ್ಟಪಟ್ಟು ನಿರ್ಮಿಸಿರುವ ಹಲವು ಪಾರಂಪರಿಕ ಕಟ್ಟಡಗಳಿದ್ದು, ಅವುಗಳನ್ನು ಉಳಿಸಿ, ಸಂರಕ್ಷಿಸುವ ಕರ್ತವ್ಯ ಸರ್ಕಾರದ ಜೊತೆಗೆ ಯುವ ಪೀಳಿಗೆಯ ಮೇಲೂ ಇದೆ" ಎಂದು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಹೇಳಿದರು.
ನಗರದ ಪುರಭವನ(ಟೌನ್ ಹಾಲ್)ದಲ್ಲಿ ಆಯೋಜಿಸಲಾಗಿದ್ದ, ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರಿನಲ್ಲಿ ಪಾರಂಪರಿಕ ನಡಿಗೆಗೆ ಚಾಲನೆ (ETV Bharat) "ಟಾಂಗಾ ಸವಾರಿ, ಬೈಕ್ ಸವಾರಿ ಹಾಗೂ ಪಾರಂಪರಿಕ ನಡಿಗೆಯಿಂದ ಪರಂಪರೆಯನ್ನು ಉಳಿಸಲಾಗುವುದಿಲ್ಲ. ಈ ನಡಿಗೆ ಹಾಗೂ ಸವಾರಿಗಳ ಮೂಲಕ ಯುವಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಇದರಲ್ಲಿ ತಿಳಿದುಕೊಂಡ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾರಂಪರಿಕ ಕಟ್ಟಡಗಳು, ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕು" ಎಂದು ಅವರು ಸಲಹೆ ನೀಡಿದರು.
"ರಾಜ್ಯದಲ್ಲಿ ಸಂರಕ್ಷಣೆ ಮಾಡಿರದ ಅನೇಕ ಕಟ್ಟಡಗಳಿವೆ ಹಾಗೂ ವಾಸ್ತುಶಿಲ್ಪಗಳಿವೆ. ಇದರ ಬಗ್ಗೆ ಎಷ್ಟೋ ಜನರಿಗೆ ಮಾಹಿತಿಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇಲಾಖೆಯ ವತಿಯಿಂದ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕೈ ಜೋಡಿಸಿ ಯಶಸ್ವಿಗೊಳಿಸಬೇಕು" ಎಂದು ಮನವಿ ಮಾಡಿದರು.
ಚಾಮರಾಜನರ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಗಂಗಾಧರ್ ಮಾತನಾಡಿ, "ಪ್ರಪಂಚದ ಯಾವುದೇ ಸ್ಥಳಕ್ಕೆ ಹೋದರೂ ಮೈಸೂರು ಎಂದಾಕ್ಷಣ ನೆನಪಾಗುವುದೇ ಇಲ್ಲಿನ ಅರಮನೆ ಮತ್ತು ಪಾರಂಪರಿಕ ಕಟ್ಟಡಗಳು. ಅಂತಹ ವಿಶ್ವವಿಖ್ಯಾತ ಪರಂಪರೆ, ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಯುವ ಜನರಲ್ಲಿ ಅರಿವು ಮೂಡಿಸಲು ಮತ್ತು ಅವರಿಗೆ ಪರಂಪರೆಯ ಮಹತ್ವವನ್ನು ತಿಳಿಸಲು ಇಂದು ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿದೆ. ಇಲ್ಲಿ ಕಲಿತ ವಿಷಯಗಳನ್ನು ಇತರರೊಂದಿಗೆ ಹಂಚಿಕೊಂಡು ಅವರಲ್ಲಿಯೂ ಪರಂಪರೆ, ಸಂಸ್ಕೃತಿ, ಪಾರಂಪರಿಕ ಕಟ್ಟಡಗಳ ಬಗ್ಗೆ ಅರಿವು ಮೂಡಿಸಬೇಕು" ಎಂದು ತಿಳಿಸಿದರು.
"ನಮ್ಮ ಹಿರಿಯರಾದ ಮೈಸೂರು ಸಂಸ್ಥಾನದ ರಾಜರು ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇದರ ಪ್ರತಿರೂಪವಾಗಿ ಇಂದು ಮೈಸೂರಿನಲ್ಲಿ ಹಲವಾರು ವಿಶಿಷ್ಟ ಮತ್ತು ಸುಂದರ ಕಟ್ಟಡಗಳಿವೆ. ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ಜಗನ್ಮೋಹನ ಅರಮನೆ, ಮೈಸೂರು ಮೆಡಿಕಲ್ ಕಾಲೇಜು, ಕೆ.ಆರ್ ಹಾಸ್ಪಿಟಲ್ ಸೇರಿದಂತೆ ಹಲವಾರು ಕಟ್ಟಡಗಳಿವೆ. ಅವುಗಳನ್ನು ಉಳಿಸಿಕೊಂಡು ಹೋಗಬೇಕು. ಯುವ ಪೀಳಿಗೆಗಳಿಗೆ ಮಾಹಿತಿ ಕೊಡಬೇಕು. ಹಾಗೆಯೇ ಯುವ ಪೀಳಿಗೆ ಕೂಡಾ ಮಾಹಿತಿ ಪಡೆಯಲು ತಾವೇ ಆಸಕ್ತಿವಹಿಸಬೇಕು" ಎಂದು ಸಲಹೆ ನೀಡಿದರು
ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ನಾಗೇಶ್ ಬೆಟ್ಟಕೋಟೆಮಾತನಾಡಿ, "ವಿಶ್ವಕ್ಕೆ ಪಾರಂಪರಿಕ ಜ್ಞಾನವನ್ನು ತಂದುಕೊಟ್ಟ ನಾಡು ನಮ್ಮ ಮೈಸೂರು. ರಾಜ್ಯಕ್ಕೆ ಕೀರ್ತಿ ತರುವುದು ಶಿಕ್ಷಣ, ಕ್ರೀಡೆ ಸೇರಿದಂತೆ ಪಾರಂಪರಿಕ ಕಟ್ಟಡಗಳು. ಹೀಗಿದ್ದಾಗ ಅವುಗಳನ್ನು ಉಳಿಸುವುದು, ಬೆಳೆಸುವುದು ನಮ್ಮ ಕರ್ತವ್ಯ" ಎಂದು ತಿಳಿಸಿದರು.
ಪಾರಂಪರಿಕ ನಡಿಗೆಯಲ್ಲಿ 350ಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ಕಟ್ಟಡಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ಪಾರಂಪರಿಕ ನಡಿಗೆಯು ರಂಗಾಚಾರ್ಲು ಪುರಭವನದಿಂದ ಪ್ರಾರಂಭವಾಗಿ ಸಿಲ್ವರ್ ಜೂಬಿಲಿ ಕ್ಲಾಕ್ ಟವರ್(ದೊಡ್ಡ ಗಡಿಯಾರ), ಮೇಸನ್ ಕ್ಲಬ್, ಹತ್ತನೇ ಚಾಮರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ ಕೃಷ್ಣರಾಜೇಂದ್ರ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಗಾಂಧಿ ವೃತ್ತದ ಮೂಲಕ ಹಾದು ರಂಗಾಚಾರ್ಲು ಪುರಭವನ(ಟೌನ್ ಹಾಲ್)ದ ಸಮೀಪ ಮುಕ್ತಾಯಗೊಂಡಿತು.
ವಿಆರ್ ಕಾರ್ಡ್: ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವತಿಯಿಂದ ಪಾರಂಪರಿಕ ಕಟ್ಟಡಗಳ ಬಗ್ಗೆ ಕುಳಿತಲ್ಲೇ ಮೊಬೈಲ್ ಮೂಲಕ ಮಾಹಿತಿ ತಿಳಿಯಲು ವಿ.ಆರ್.ಕಾರ್ಡ್ ಹೊರತರಲಾಗಿದ್ದು, ಕಾರ್ಡ್ನ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಅಪ್ಲಿಕೇಶನ್ ಡೌನ್ಲೋಡ್ ಆಗುತ್ತದೆ. ಆ್ಯಪ್ನಲ್ಲಿರುವ ಕಣ್ಣಿನ ಸಿಂಬಲ್ ಅನ್ನು ಸ್ಕ್ಯಾನ್ ಮಾಡಿದಾಗ ಮೈಸೂರು ವಿಶ್ವವಿದ್ಯಾನಿಲಯ, ಅರಮನೆ ಸೇರಿದಂತೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಯ ಜೊತೆಗೆ ಮಾಹಿತಿ ಪಡೆಯಬಹುದಾಗಿದೆ. ಈ ಕಾರ್ಡ್ನ ಬೆಲೆ 10 ರೂ. ಆಗಿದ್ದು, ಪುರಾತತ್ವ ಇಲಾಖೆಯಲ್ಲಿ ಪಡೆಯಬಹುದು.
ಇದನ್ನೂ ಓದಿ:ಯುವದಸರಾಗೆ ಇಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ, ಶ್ರೇಯಾ ಘೋಷಲ್ ಗಾನಸುಧೆ - Yuva Dasara