ದಾವಣಗೆರೆ:'ರೂಬಿಕ್ ಕ್ಯೂಬಿಕ್ ಮೊಸಾಯಿಕ್' ಗೇಮ್ನಲ್ಲಿ ಕೇವಲ 44 ಸೆಕೆಂಡ್‌ಗಳಲ್ಲಿ ಕ್ಯೂಬ್ಗಳನ್ನು ಜೋಡಿಸಿ ದಾವಣಗೆರೆ ವಿದ್ಯಾರ್ಥಿಯೊಬ್ಬ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಕ್ಯೂಬ್ಗಳನ್ನು ಅತಿ ವೇಗವಾಗಿ ಜೋಡಿಸಿದ್ದರಿಂದ ವಿದ್ಯಾರ್ಥಿಯ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರಿದೆ. ಅಲ್ಲದೆ, ಗಿನ್ನಿಸ್ ಸಂಸ್ಥೆ ನೇತೃತ್ವದಲ್ಲಿ ನಡೆದ ಈ ಆಟದಲ್ಲಿ ಗೆದ್ದು ಬೀಗಿದ ವಿದ್ಯಾರ್ಥಿಗೆ ಸರ್ಟಿಫಿಕೆಟ್ ಕೊಟ್ಟು ಗೌರವಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಾಸನ ಗ್ರಾಮದ ರಾಜು ಹಾಗು ಸುಜಾತ ದಂಪತಿಯ ಪುತ್ರ ಗುರುಕಿರಣ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿ ಗ್ರಾಮದ ಸಿದ್ಧಿವಿನಾಯಕ ರೆಸಿಡೆನ್ಸಿಯಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಗುರುಕಿರಣ್ 'ರೂಬಿಕ್ ಕ್ಯೂಬಿಕ್ ಮೊಸಾಯಿಕ್ ಗೇಮ್' ಅಲ್ಲಿ ಸಾಧನೆ ಮಾಡಿದ್ದಾರೆ.
ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ಗುರುಕಿರಣ್, "ರೂಬಿಕ್ ಕ್ಯೂಬಿಕ್ ಮೊಸಾಯಿಕ್ 3*3 ಆಟದಲ್ಲಿ ಕ್ಷಿಪ್ರವಾಗಿ ಕ್ಯೂಬಿಕ್ಗಳನ್ನು ಜೋಡಿಸಿದ್ದಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಆಗಿದೆ. ಹರಡಿರುವ ಕ್ಯೂಬ್ಗಳನ್ನು ಪ್ಯಾಟರ್ನ್ಗೆ ತಕ್ಕಂತೆ ಜೋಡಿಸಬೇಕು. ಕೇವಲ 44 ಸೆಕೆಂಡ್‌ಗಳಲ್ಲಿ ಜೋಡಿಸಿದ್ದಕ್ಕಾಗಿ ದಾಖಲೆಯಲ್ಲಿ ತನ್ನ ಹೆಸರು ಸೇರ್ಪಡೆ ಆಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿ ಅಂಗಡಿ ಹಳ್ಳಿಯ ಸಿದ್ಧಿ ವಿನಾಯಕ ಶಾಲೆಯಲ್ಲಿ ಗಿನ್ನಿಸ್ ಸಂಸ್ಥೆ ನೇತೃತ್ವದಲ್ಲಿ ಗೇಮ್ ನಡೆದಿತ್ತು. ನನ್ನ ಹೆಸರು ವರ್ಲ್ಡ್ ರೆಕಾರ್ಡ್ ದಾಖಲೆಯಲ್ಲಿ ಸೇರಿದೆ. ಇದರಲ್ಲಿ ವಿವಿಧ ದೇಶದ 15 ಜನ ಭಾಗವಹಿಸಿದ್ದರು'' ಎಂದರು.