ಬೆಂಗಳೂರು:ನಿರುದ್ಯೋಗ ದಿಂದ ಬಳಲುತ್ತಿರುವ ರಾಜ್ಯದ ಯುವ ಜನಾಂಗಕ್ಕೆ ಪರಿಹಾರ ನೀಡುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದೆ. ಪದವೀಧರ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಆದರೆ, ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ಅಧಿಕೃತ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೆ ಪರದಾಡುವಂತಾಗಿದೆ.
ಯುವನಿಧಿ ಕಾಂಗ್ರೆಸ್ ಸರ್ಕಾರದ ಐದನೇ ಹಾಗೂ ಕೊನೆಯ ಗ್ಯಾರಂಟಿ. 2023, ಡಿ.26ರಂದು ಸಿಎಂ ಸಿದ್ದರಾಮಯ್ಯ ಯುವನಿಧಿ ಯೋಜನೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಪದವಿ, ಡಿಪ್ಲೋಮಾ ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದಿದ್ದರೆ, ಗರಿಷ್ಠ ಎರಡು ವರ್ಷದವರೆಗೆ ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವುದು. ಅದರಂತೆ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದವರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗಿದೆ.
ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ್ಯ ಪರಿಶೀಲನೆ ಇರುತ್ತದೆ. ಉದ್ಯೋಗ ಪಡೆದ ನಂತರ ಫಲಾನುಭವಿಗಳು ಆ ಬಗ್ಗೆ ಸ್ವಯಂ ಘೋಷಣೆ ಮಾಡಬೇಕೆಂಬ ಷರತ್ತಿನೊಂದಿಗೆ ಯುವನಿಧಿ ಯೋಜನೆ ಜಾರಿಯಾಗಿದೆ. ಒಂದು ವೇಳೆ ತಪ್ಪು ಘೋಷಣೆ ಅಥವಾ ಉದ್ಯೋಗ ಲಭಿಸಿರುವುದನ್ನು ಘೋಷಿಸಲು ವಿಫಲರಾದರೆ ದಂಡ ವಿಧಿಸುವ ಷರತ್ತನ್ನೂ ಹಾಕಲಾಗಿದೆ. ಆದರೆ, ಯುವನಿಧಿ ಅನುಷ್ಠಾನ ಮಾಡಿ ಒಂದು ವರ್ಷ ಸಮೀಪಿಸುತ್ತಿದ್ದು, ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಎದುರಾಗಿದೆ.
ಎಷ್ಟು ನಿರುದ್ಯೋಗಿಗಳಿಗೆ ಯುವನಿಧಿ ಭಾಗ್ಯ?: ಕಳೆದ ವರ್ಷ ಡಿಸೆಂಬರ್ನಲ್ಲಿ ಆರಂಭವಾದ ಯುವನಿಧಿ ಯೋಜನೆ ಒಂದು ವರ್ಷ ಪೂರೈಸುವ ಸನಿಹದಲ್ಲಿದೆ. ಯೋಜನೆಯಡಿ ಪದವೀಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೋಮಾ (6 ಬೋರ್ಡ್ಗಳಿಂದ) ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರೂ. ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷದ ಅವಧಿಗೆ ಅಥವಾ ಉದ್ಯೋಗ ಸಿಗುವವರೆಗೆ (ಇವುಗಳಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ) ನೇರ ನಗದು ವರ್ಗಾವಣೆ ಮೂಲಕ (ಡಿಬಿಟಿ) ಪಾವತಿಸಲಾಗುತ್ತಿದೆ.
ಯುವನಿಧಿ ಯೋಜನೆಗಾಗಿ ನವೆಂಬರ್ ಅಂತ್ಯಕ್ಕೆ ಒಟ್ಟು 1,83,710 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅಕ್ಟೋಬರ್ 2024 ಅಂತ್ಯಕ್ಕೆ ಒಟ್ಟು 1,48,231 ಫಲಾನುಭವಿಗಳಿದ್ದು, ನೇರ ನಗದು ವರ್ಗಾವಣೆ ಮೂಲಕ 172.78 ಕೋಟಿ ರೂಪಾಯಿಗಳಷ್ಟು ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಮಾಹಿತಿ ನೀಡಿದೆ.
2023-24 ಸಾಲಿನ ಮೊದಲ ವರ್ಷದ ಯುವನಿಧಿ ಅನುಷ್ಠಾನ ಸಂಬಂಧ 250 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಒಟ್ಟು 89 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2024-25 ಸಾಲಿನಲ್ಲಿ ಯುವನಿಧಿಗಾಗಿ ಸರ್ಕಾರ 650 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ನವೆಂಬರ್ವರೆಗೆ 132 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ ಯುವನಿಧಿ ಯೋಜನೆಯಡಿ ಸುಮಾರು 1.85 ಲಕ್ಷ ಫಲಾನುಭವಿಗಳಿದ್ದಾರೆ.
ಲಭ್ಯವಾಗದ ನಿಖರ ಉದ್ಯೋಗ ಸ್ಥಿತಿಯ ಮಾಹಿತಿ: ಈ ಯೋಜನೆಯ ಪ್ರಯೋಜನ ಪಡೆಯಲು ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಯೋಜನೆಯ ಅರ್ಹ ಫಲಾನುಭವಿಗಳು ನಿರಂತರವಾಗಿ ಯೋಜನೆಯ ಪ್ರಯೋಜನ ಪಡೆಯಲು ತಮ್ಮ ನಿರುದ್ಯೋಗ ಸ್ಥಿತಿಯ ಬಗ್ಗೆ ಪ್ರತಿ ತಿಂಗಳು 1ರಿಂದ 25ನೇ ದಿನಾಂಕದೊಳಗೆ ಕಡ್ಡಾಯವಾಗಿ ಮಾಸಿಕ ಸ್ವಯಂ ಘೋಷಣೆ ನೀಡಬೇಕಾಗಿರುತ್ತದೆ. ರಾಜ್ಯ ಸರ್ಕಾರಕ್ಕೆ ಇದೀಗ ಫಲಾನುಭವಿಗಳು ನಿಖರ ಉದ್ಯೋಗ ಸ್ಥಿತಿಯ ಮಾಹಿತಿ ಪಡೆಯುವುದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಫಲಾನುಭವಿಗಳು ನಿರುದ್ಯೋಗ ಸ್ಥಿತಿಯ ಸ್ವಯಂ ಘೋಷಣೆ ಮಾಡುತ್ತಿದ್ದರೂ, ಅದರ ವಾಸ್ತವತೆ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ.
ಇತ್ತ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿನ ಮಾಹಿತಿ ನೀಡಲು ನಿರಾಕರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧಿಕಾರಿ ತಿಳಿಸಿದ್ದಾರೆ. ಕೇಂದ್ರ ಸಚಿವಾಲಯದ ಜೊತೆ ದತ್ತಾಂಶ ಕೋರಿ ಅನೇಕ ಬಾರಿ ಪತ್ರ ವ್ಯವಹಾರ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದಿದ್ದಾರೆ.