ಬೆಂಗಳೂರು:ನಗರದಲ್ಲಿರುವ ಮಹಿಳಾ ಪೇಯಿಂಗ್ ಗೆಸ್ಟ್ (ಪಿಜಿ)ಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ನಿರ್ಧರಿಸಿವೆ. ಇತ್ತೀಚೆಗೆ ಕೋರಮಂಗಲದಲ್ಲಿರುವ ಮಹಿಳಾ ಪಿಜಿಗೆ ವ್ಯಕ್ತಿಯೊಬ್ಬ ನುಗ್ಗಿ ಯುವತಿಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ನಗರದಲ್ಲಿರುವ ಪಿಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆಯ ಪರವಾನಗಿಯನ್ನು ಪಡೆದುಕೊಳ್ಳಬೇಕಿದೆ.
ಪಿಜಿಗೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆಯಬೇಕು. ರಕ್ತ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳು ಹಾಗೂ ಮೊಬೈಲ್ ಸಂಖ್ಯೆಗಳನ್ನೂ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಪಿಜಿಗೆ ಭೇಟಿ ನೀಡಲು ಬರುವ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಯಾರೇ ಬಂದರು ಅವರ ಎಲ್ಲಾ ವಿವರಗಳನ್ನು ಪ್ರತ್ಯೇಕವಾಗಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕು. ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕು. ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆ, ಕಾನೂನು ಬಾಹಿರದಂತಹದಕ್ಕೆ ಪಿಜಿ ಒಳಗೆ ಅವಕಾಶ ನೀಡಬಾರದು. ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ-112, ವೈದ್ಯಕೀಯ ಸೇವೆಯ-103, ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ - 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಕಾಣುವಂತೆ ಹಾಕಬೇಕು. ಪ್ರಥಮ ಚಿಕಿತ್ಸೆ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.