ಬೆಂಗಳೂರು : ರಾಜಾಜಿನಗರದ ಶ್ರೀ ರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀ ರಾಮಾಂಜನೇಯ ಮೂರ್ತಿ ಅಕ್ಟೋಬರ್ 23 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷ ಕೆ. ಎಸ್ ಶ್ರೀಧರ್ ತಿಳಿಸಿದರು.
ಈ ಕುರಿತು ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀ ರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಅಕ್ಟೋಬರ್ 21 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಲಿದೆ. ಅಕ್ಟೋಬರ್ 23 ರಂದು ವಿದ್ಯುಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದರು.
ಅಕ್ಟೋಬರ್ 21 ರಂದು ಸಂಜೆ ಗಣಪತಿಪೂಜೆ, ವಿದ್ವಜ್ಜನ ಪ್ರಾರ್ಥನೆ, ದೇವತಾ ಪ್ರಾರ್ಥನೆ, ಕಳಸ ಪ್ರತಿಷ್ಠಾಪನೆ ಕಾರ್ಯದಿಂದ ಶುಭಾರಂಭ ಆಗಲಿದೆ. ಅಕ್ಟೋಬರ್ 22 ರಂದು ಬೆಳಗ್ಗೆ 63 ಅಡಿಯ ಶ್ರೀ ರಾಮಾಂಜನೇಯ ಚರಪ್ರತಿಷ್ಠಾನದ ಪೂಜೆ, ಹೋಮ ಸಂಕಲ್ಪವನ್ನು ಸಿದ್ದಗಂಗಾಮಠ ಸಿದ್ದಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಕೇಂದ್ರ ಸಚಿವ ವಿ. ಸೋಮಣ್ಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್. ಎಂ ರೇವಣ್ಣ, ಶಾಸಕರುಗಳಾದ ಡಾ. ಸಿ. ಎನ್ ಅಶ್ವತ್ಥ್ ನಾರಾಯಣ್, ಕೆ. ಗೋಪಾಲಯ್ಯ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನೆರವೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಚಲನಚಿತ್ರ ನಟರುಗಳಾದ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀ ಮುರಳಿ ಹಾಗೂ ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾಗಡಿ ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷ ಹೆಚ್. ಎಂ ಕೃಷ್ಣಮೂರ್ತಿ, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಮೋಹನ್ ಕುಮಾರ್, ಜಯರತ್ನ, ಶಿಲ್ಪಿ ಜೀವನ್ ಶಿವಮೊಗ್ಗ, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.
ಇದನ್ನೂ ಓದಿ :ಶ್ರೀರಾಮ ಮೂರ್ತಿ ಕೆತ್ತನೆಯಲ್ಲಿ ವಿಟ್ಲದ ಚಿದಾನಂದ ಆಚಾರ್ಯ: 'ಅಳಿಲು ಸೇವೆಯ ಧನ್ಯತೆ'