ಮಂಗಳೂರು(ದಕ್ಷಿಣ ಕನ್ನಡ):ಕಡಬದಲ್ಲಿ ಸೋಮವಾರ ಕಿಡಿಗೇಡಿಯಿಂದ ಆ್ಯಸಿಡ್ ದಾಳಿಗೊಳಗಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಬಳಿಕ ಸಂತ್ರಸ್ತೆಯರು ಹಾಗೂ ಪೋಷಕರಿಗೆ ಸಾಂತ್ವನ ಹೇಳಿದರು.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ನಾಗಲಕ್ಷ್ಮಿ ಚೌಧರಿ, "ಈ ಘಟನೆಯ ಬಗ್ಗೆ ಡಿಸಿ ಕಚೇರಿಯಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ. ಮೂವರು ವಿದ್ಯಾರ್ಥಿನಿಯರೂ ಅಪಾಯದಿಂದ ಪಾರಾಗಿದ್ದಾರೆ. ಸಂತ್ರಸ್ತೆಯರಲ್ಲಿ ಒಬ್ಬಳು 20%, ಮತ್ತೊಬ್ಬಳು 12% ಹಾಗೂ 10% ಗಿಂತ ಕಡಿಮೆ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿನಿಯರ ನಗು, ಅಳುವನ್ನು ನೋಡಿದೆ. ಅವರ ಮನಸ್ಥೈರ್ಯಕ್ಕೆ ಮೆಚ್ಚಲೇಬೇಕು. ಅವರು 'ನಾವು ಮತ್ತೆ ಕನ್ನಡ ಪರೀಕ್ಷೆ ಬರೆಯಬೇಕಾ' ಎಂದು ಕೇಳಿದ್ದಾರೆ. ಇದರ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದ್ದೇನೆ" ಎಂದು ತಿಳಿಸಿದರು.