ಹಾವೇರಿ : ನಗರದ ನಾಗೇಂದ್ರನಮಟ್ಟಿಯಲ್ಲಿ ಭಾನುವಾರ ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಜನಪ್ರಿಯ ಕೊಬ್ಬರಿ ಹೋರಿಯಾಗಿ ಮೃತಪಟ್ಟ ಹಾವೇರಿ ರಾಕ್ ಸ್ಟಾರ್ ಹೋರಿ ಸವಿನೆನಪಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಸಹಸ್ರಾರು ಹೋರಿ ಅಭಿಮಾನಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಣೆಬೆನ್ನೂರು ಕಾ ರಾಜಾ, ಶಿವಮೊಗ್ಗದ ಕಿಂಗ್, ಭೀಮ್, ಕರ್ಜಗಿಯ ಓಂ, ಹಾವೇರಿ ಕಾ ರಾಜಾ, ಕರಿ ಚಿರತೆ, ಅನ್ನದಾತ ಸೇರಿದಂತೆ ನಾನಾ ಹೆಸರುಗಳಿಂದ ಗುರುತಿಸಿಕೊಂಡಿರುವ ಸಾವಿರಾರು ಹೋರಿಗಳು ಭಾಗವಹಿಸಿದ್ದವು.
ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ (ETV Bharat) ಹೋರಿಗಳ ಶರವೇಗದ ಓಟ; ಅಖಾಡದಲ್ಲಿ ಜಿಂಕೆಯಂತೆ ಓಡಿದ ಕೊಬ್ಬರಿ ಹೋರಿಗಳು ಪೈಲ್ವಾನರ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿದ್ದವು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಕೇಕೆ, ಚಪ್ಪಾಳೆಗೆ ಹುಚ್ಚೆದ್ದು ಕುಣಿಯುತ್ತಿರೋ ಯುವಕರ ಮಧ್ಯೆ ಹೋರಿಗಳು ಶರವೇಗದಲ್ಲಿ ಓಡಿದವು.
ಹೋರಿಗಳನ್ನ ಮಾಲೀಕರು ಬಲೂನ್, ರಿಬ್ಬನ್, ಜೂಲಾ, ಗೆಜ್ಜೆ, ಕೊಂಬೆಣಸು ಕೊಬ್ಬರಿ ಹಾರ ಕಟ್ಟಿ ಅಖಾಡದಲ್ಲಿ ಬಿಟ್ಟಿದ್ದರು. ಮಿಂಚಿನಂತೆ ಓಡಿ ಮಾಯವಾಗುತ್ತಿದ್ದ ಹೋರಿಯನ್ನ ಹಿಡಿಯಲು ಪೈಲ್ವಾನರು ಹರಸಾಹಸಪಡುತ್ತಿದ್ದ ದೃಶ್ಯಗಳು ನೋಡುಗರ ಮೈನವಿರೇಳಿಸುವಂತಿದ್ದವು.
ಈ ಹೋರಿ ಹಬ್ಬ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಹೋರಿ ಹಬ್ಬದಲ್ಲಿ ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಹೋರಿಗಳು ಪಾಲ್ಗೊಂಡಿದ್ದವು.
ಒಳ್ಳೆಯ ಆಹಾರ ಪದಾರ್ಥ ತಿನ್ನಿಸಿ ಸಜ್ಜುಗೊಳಿಸುವ ರೈತರು; ಹೋರಿಗಳನ್ನು ಅಲಂಕಾರ ಮಾಡಿದ ನಂತರ ಹೋರಿ ಮಾಲೀಕರು ಅವುಗಳನ್ನು ಅಖಾಡಕ್ಕೆ ಕರೆತಂದಿದ್ರು. ಹೋರಿ ಮಾಲೀಕರು ಹೋರಿಗಳಿಗೆ ಶೇಂಗಾ ಹಿಂಡಿ, ಶೇಂಗಾ ಹೊಟ್ಟು, ಮೇವು, ಮೊಟ್ಟೆ ಸೇರಿದಂತೆ ವಿವಿಧ ರೀತಿಯ ಪೌಷ್ಠಿಕಾಂಶ ಭರಿತ ಪದಾರ್ಥಗಳನ್ನು ತಿನ್ನಿಸಿ ಹೋರಿಗಳನ್ನು ಕಟ್ಟುಮಸ್ತಾಗಿ ರೆಡಿ ಮಾಡಿ ಸ್ಪರ್ಧೆಗೆ ತಂದಿದ್ದರು. ಹೋರಿಗಳಿಗೆ ಪ್ರತಿದಿನ ಬೆಳಗ್ಗೆ ರನ್ನಿಂಗ್, ಸ್ವಿಮ್ಮಿಂಗ್ ಮಾಡಿಸಿ ತಾಲೀಮು ನಡೆಸಿ, ಹೋರಿ ಹಬ್ಬಕ್ಕೆ ಅಂತಾ ಹುರಿಗೊಳಿಸಿರುತ್ತಾರೆ.
ಕೆಲವು ರೈತರು ಕೃಷಿ ಕೆಲಸದ ಜೊತೆಗೆ ಹೋರಿ ಹಬ್ಬಕ್ಕಾಗಿ ಹೋರಿಗಳನ್ನು ತಯಾರು ಮಾಡಿದ್ರೆ, ಕೆಲವರು ಹೋರಿ ಹಬ್ಬಕ್ಕಾಗಿ ಎಂದೇ ಹೋರಿಗಳನ್ನು ತಯಾರು ಮಾಡಿರ್ತಾರೆ. ಸ್ಪರ್ಧೆಯಲ್ಲಿ ಬಹುಮಾನವಾಗಿ ಮೋಟಾರ್ ಸೈಕಲ್ ಸೇರಿದಂತೆ ಚಿನ್ನ ಮತ್ತು ಇತರ ವಸ್ತುಗಳನ್ನ ಬಹುಮಾನವಾಗಿ ಇಡಲಾಗಿತ್ತು. ಜನರು ಅತ್ಯಂತ ಹುರುಪಿನಿಂದ ಎತ್ತುಗಳನ್ನು ಓಡಿಸಿ ಖುಷಿಪಟ್ಟರು. ಸ್ಪರ್ಧೆಯಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡ ಘಟನೆಗಳು ಸಹ ನಡೆದವು. ಓರ್ವ ವ್ಯಕ್ತಿಯ ಕಣ್ಣು ಗುಡ್ಡೆಯೇ ಕಿತ್ತು ಹೋಗಿ ನೋಡುಗರ ಎದೆ ಜಲ್ಲೆನಿಸಿತು.
ಪೈಲ್ವಾನರ ದೇಹದ ವಿವಿಧ ಭಾಗಗಳಲ್ಲಿ ಗಾಯ: ಸ್ಪರ್ಧೆಯಲ್ಲಿ ಗಾಯಗೊಳ್ಳುತ್ತಿದ್ದಂತೆ ಗಾಯಾಳುಗಳನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಯಿತು. ಇನ್ನೂ ಕೆಲವು ಗಾಯಾಳುಗಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಕೊಬ್ಬರಿ ಹೋರಿಗಳ ತಿವಿತದಿಂದ ಎದೆ ಭಾಗ, ಕೈ ಕಾಲು ಹಾಗೂ ಸೇರಿದಂತೆ ಪೈಲ್ವಾನರ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಇದನ್ನೂ ಓದಿ :ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಎತ್ತುಗಳಿಗೆ ಭಾರೀ ಬೇಡಿಕೆ - Haveri Cattle Market