ಕರ್ನಾಟಕ

karnataka

ETV Bharat / state

ಪಂಚ ಗ್ಯಾರಂಟಿ, ಬದ್ಧ ವೆಚ್ಚದ ಎಫೆಕ್ಟ್​: ₹60,000 ಕೋಟಿ ಸಾಲದ ಮೊರೆ ಹೋದ ರಾಜ್ಯ ಸರ್ಕಾರ - 60 THOUSAND CRORES OF LOAN

ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ಪ್ರಸಕ್ತ ತೈಮಾಸಿಕದಲ್ಲಿ 60,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಉದ್ದೇಶಿಸಿದೆ. ಅದರಂತೆ, ಅ.1ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.

ವಿಧಾನಸೌಧ
ವಿಧಾನಸೌಧ(ಸಂಗ್ರಹ ಚಿತ್ರ) (ETV Bharat)

By ETV Bharat Karnataka Team

Published : Oct 14, 2024, 4:51 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಂಚ ಗ್ಯಾರಂಟಿ ಹಾಗೂ ಬದ್ಧ ವೆಚ್ಚದ ಭಾರಿ ಹೊರೆಯ ಮಧ್ಯೆ ಆಡಳಿತ ನಡೆಸುತ್ತಿದೆ. ರಾಜ್ಯ ಸರ್ಕಾರ ಈ ಬಾರಿ ಹಣಕಾಸು ನಿರ್ವಹಣೆಗೆ ಸಾಲವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಪ್ರಸಕ್ತ ವರ್ಷದ ಆರು ತಿಂಗಳಲ್ಲಿ ಹೆಚ್ಚಿನ ಸಾಲದ ಮೊರೆ ಹೋಗದ ರಾಜ್ಯ ಸರ್ಕಾರ ಇದೀಗ ಸಾಲ ಎತ್ತುವಳಿ ಪ್ರಕ್ರಿಯೆಗೆ ವೇಗ ನೀಡಿದೆ.

ಬಜೆಟ್ ವರ್ಷದ ಆರು ತಿಂಗಳು ಕಳೆದಿದೆ. ಕಾಂಗ್ರೆಸ್ ಸರ್ಕಾರದ ಎರಡನೇ ಬಜೆಟ್ ವರ್ಷದಲ್ಲೂ ಪಂಚ ಗ್ಯಾರಂಟಿಗೆ ಹೆಚ್ಚಿನ‌ ಹಣ ಕೊಡಮಾಡಲಾಗುತ್ತಿದೆ. ಇದರ ಜೊತೆಗೆ ಏಳನೇ ವೇತನ‌ ಆಯೋಗದ ಪರಿಷ್ಕರಣೆಯಿಂದ ಬದ್ಧ ವೆಚ್ಚ ದುಪ್ಪಟ್ಟಾಗಿದೆ. ದೊಡ್ಡ ಆರ್ಥಿಕ ಹೊರೆಯ ಮಧ್ಯೆ ಕಾಂಗ್ರೆಸ್ ಸರ್ಕಾರ ಹಣಕಾಸು ನಿರ್ವಹಣೆ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೂ ಹಣ ಹೊಂದಿಸುವ ಒತ್ತಡದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ.

ಹೀಗಾಗಿ ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಸಾಲದ ಮೊರೆ ಹೋಗಲು ನಿರ್ಧರಿಸಿದೆ. ಸಾಲದ ಮೂಲಕ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ನೀಡಲು ತೀರ್ಮಾನಿಸಿದೆ. ಕಳೆದ ಬಾರಿಗಿಂತ ಈ ವರ್ಷ ಆದಾಯ ಸಂಗ್ರಹ ಉತ್ತಮವಾಗಿದ್ದರೂ, ಈವರೆಗೆ ಬಜೆಟ್ ಗುರಿಯಂತೆ ಆದಾಯ ತಲುಪಲು ಸಾಧ್ಯವಾಗುತ್ತಿಲ್ಲ.

2024-25ನೇ ಸಾಲಿನಲ್ಲಿ ಅಂದಾಜು 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಲಾಗಿದೆ. ಬಹಿರಂಗ ಮಾರುಕಟ್ಟೆ ಮೂಲಕ 96,840 ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ. ಆರ್ಥಿಕ ವರ್ಷದ ಎರಡು ತ್ರೈಮಾಸಿಕದಲ್ಲಿ ರಾಜ್ಯ ಹೆಚ್ಚಿನ ಸಾಲದ ಮೊರೆ ಹೋಗಿರಲಿಲ್ಲ.‌

ಸಾರ್ವಜನಿಕ ಸಾಲವಾಗಿ ಐದು ತಿಂಗಳಲ್ಲಿ ಸುಮಾರು 7,000 ಕೋಟಿ ರೂ. ಸಾಲ ಮಾಡಿದೆ. ಉಳಿದಂತೆ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ಸಾಲ ಎತ್ತುವಳಿ ಮಾಡಿರಲಿಲ್ಲ. ಆದರೆ, ಇದೀಗ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿಗೆ ವೇಗ ನೀಡಲು ಆರಂಭಿಸಿದೆ.

6 ತಿಂಗಳಲ್ಲಿ ಅತ್ಯಲ್ಪ ಸಾಲ ಎತ್ತುವಳಿ:ರಾಜ್ಯ ಸರ್ಕಾರ ಆರ್ಥಿಕ ವರ್ಷದ ಆರು ತಿಂಗಳಲ್ಲಿ ಹೆಚ್ಚಿನ ಸಾಲದ ಮೊರೆ ಹೋಗಿರಲಿಲ್ಲ. ಎರಡು ತ್ರೈಮಾಸಿಕಗಳಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಬಹಿರಂಗ ಸಾಲ ಎತ್ತುವಳಿಗೆ ಕೈ ಹಾಕಿರಲಿಲ್ಲ. ಸೆಪ್ಟೆಂಬರ್ 24ರಂದು 3,000 ಕೋಟಿ ಸಾಲ ಎತ್ತುವಳಿ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೆ.24ರಿಂದ ಆರ್​ಬಿಐ ಮೂಲಕ ಸಾಲ ಎತ್ತುವಳಿ ಮಾಡಲು ಆರಂಭಿಸಿದೆ. ಪ್ರತಿ ವಾರಕ್ಕೊಮ್ಮೆ ಆರ್​ಬಿಐ ಮುಕ್ತ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಾಲಗಳನ್ನು ಎತ್ತುವಳಿ ಮಾಡುತ್ತಿದೆ. ಎರಡನೇ ತ್ರೈಮಾಸಿಕದ ಅಂತ್ಯದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಮಾಡಲು ಆರಂಭಿಸಿದೆ.

ಇತರ ಮೂಲಗಳಿಂದ ಸಾರ್ವಜನಿಕ ಸಾಲದ ರೂಪದಲ್ಲಿ ಸುಮಾರು 4,000 ಕೋಟಿ ರೂ. ಸಾಲವನ್ನಷ್ಟೇ ಮಾಡಿದೆ. ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಇತರ ಮೂಲಗಳ ಸಾಲ ಹಾಗೂ ಆರ್​​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಎತ್ತುವಳಿ ಮಾಡಿದ 3,000 ಕೋಟಿ ರೂ. ಸೇರಿ ಸುಮಾರು 7,000 ಕೋಟಿ ರೂ. ಸಾಲವನ್ನು ಮಾಡಿದೆ. ಬಜೆಟ್ ವರ್ಷದ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಸಾಲದ ಮೊರೆ ಹೋಗಿಲ್ಲ. ಮೊದಲಾರ್ಧ ಆರ್ಥಿಕ ವರ್ಷದಲ್ಲಿ ತೆರಿಗೆ ಆದಾಯವನ್ನೇ ಹಣಕಾಸು ನಿರ್ವಹಣೆಗೆ ನೆಚ್ಚಿಕೊಂಡಿರುವುದಾಗಿ ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಆರ್ಥಿಕ ಇಲಾಖೆ ನೀಡಿದ ಅಂಕಿಅಂಶದಂತೆ ಏಪ್ರಿಲ್ ತಿಂಗಳಲ್ಲಿ 660 ಕೋಟಿ ರೂ. ಸಾರ್ವಜನಿಕ ಸಾಲ ಮಾಡಲಾಗಿತ್ತು. ಮೇ ತಿಂಗಳಲ್ಲಿ 1,455 ಕೋಟಿ ರೂ. ಸಾಲ ಮಾಡಲಾಗಿತ್ತು. ಜೂನ್​ನಲ್ಲಿ ರಾಜ್ಯ 165 ಕೋಟಿ ರೂ. ಸಾರ್ವಜನಿಕ ಸಾಲ ಮಾಡಿದೆ. ಜುಲೈ ತಿಂಗಳಲ್ಲಿ 1,180 ಕೋಟಿ ರೂ. ಸಾಲ ಮಾಡಿದೆ. ಆಗಸ್ಟ್ ತಿಂಗಳಲ್ಲಿ 540 ಕೋಟಿ ರೂ. ಸಾಲ ಮಾಡಿದೆ. ಸೆಪ್ಟೆಂಬರ್ 24 ರಂದು ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ 3,000 ಕೋಟಿ ರೂ‌. ಸಾಲ ಎತ್ತುವಳಿ ಮಾಡಿದೆ.

ಮುಕ್ತ ಮಾರುಕಟ್ಟೆಯಿಂದ 60,000 ಕೋಟಿ ಸಾಲ: ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಪ್ರಸಕ್ತ ತೈಮಾಸಿಕ ಅಂದರೆ ಅಕ್ಟೋಬರ್‌ ನಿಂದ ಡಿಸೆಂಬರ್‌ ವರೆಗೆ 60,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಉದ್ದೇಶಿಸಿದೆ. ಈ ಸಂಬಂಧ ಆರ್​ಬಿಐಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.‌

ಅದರಂತೆ ಅಕ್ಟೋಬರ್ 1ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಇನ್ನು ಅಕ್ಟೋಬರ್ 8 ರಂದು ಮತ್ತೆ 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಆ ರೀತಿ ಅಕ್ಟೋಬರ್ ತಿಂಗಳಲ್ಲಿ ವಾರಕ್ಕೊಮ್ಮೆ ನಡೆಯುವ ಮುಕ್ತ ಮಾರುಕಟ್ಟೆ ಸಾಲ ಎತ್ತುವಳಿ ಪ್ರಕ್ರಿಯೆ ಮೂಲಕ ಒಟ್ಟು ಸುಮಾರು 20,000 ಕೋಟಿ ರೂ. ಸಾಲ ಮಾಡಲು ಉದ್ದೇಶಿಸಿದೆ.

ನವೆಂಬರ್ ತಿಂಗಳಲ್ಲಿ ಸುಮಾರು 20,000 ಕೋಟಿ ರೂ. ಸಾಲ ಮಾಡಲು ಉದ್ದೇಶಿಸಿದ್ದು, ಡಿಸೆಂಬರ್ ತಿಂಗಳಲ್ಲೂ ಸುಮಾರು 20,000 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ರಾಜ್ಯ ಸರ್ಕಾರ ಆರ್​ಬಿಐಗೆ ತಿಳಿಸಿದೆ. ಉಳಿದ ಆರು ತಿಂಗಳಲ್ಲಿ ಬಜೆಟ್ ಅಂದಾಜಿನಂತೆ ಬಹಿರಂಗ ಮಾರುಕಟ್ಟೆ ಮೂಲಕ 96,840 ಕೋಟಿ ರೂ‌. ಸಾಲ ಎತ್ತುವಳಿ ಮಾಡುವುದಾಗಿ ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ:ಬ್ಯಾಂಕ್​ಗಳಿಗೆ ವಂಚಿಸಿದ ಉದ್ಯಮಿಗಳ ಹೆಸರು ಬಹಿರಂಗಪಡಿಸಲು ಆಗ್ರಹ

ABOUT THE AUTHOR

...view details